Home Mangalorean News Kannada News ಬೆಂಗಳೂರು: ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ- ಪ್ರಮೋದ್ ಮುತಾಲಿಕ್ ಆರೋಪ

ಬೆಂಗಳೂರು: ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ- ಪ್ರಮೋದ್ ಮುತಾಲಿಕ್ ಆರೋಪ

Spread the love

ಬೆಂಗಳೂರು:  ಕರ್ನಾಟಕ ಸರ್ಕಾರ  ಶಿವಮೊಗ್ಗ,  ಹಾಸನ ಮತ್ತು ಮೈಸೂರು ಗಲಭೆಗಳಲ್ಲಿ ಭಾಗಿಯಾಗಿದ್ದ ಪಿಎಫ್ ಐ ಮತ್ತು ಕೆಎಫ್ ಡಿ ಕಾರ್ಯಕರ್ತರ ವಿರುದ್ಧದ 140 ಕೇಸುಗಳನ್ನು ವಾಪಸ್ ಪಡೆಯುವುದರೊಂದಿಗೆ ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅನೇಕ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಕೆಎಫ್ ಡಿ (ಕರ್ನಾಟಕ ಡಿಗ್ನಿಟಿ ಫೋರಂ) ಹಾಗೂ ಪಿಎಫ್ ಐ (ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ)ನ 1600 ಗಲಭೆಕೋರರ ಮೇಲಿನ 140 ಕೇಸ್ ವಾಪಸ್ ಪಡೆದಿದೆ. ಈ ಮೂಲಕ ಸರ್ಕಾರ ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದೆ ಎಂದಿದ್ದಾರೆ.

ಕೇರಳ, ಗೋವಾ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಇತ್ಯಾದಿ ರಾಜ್ಯಗಳಲ್ಲಿ ಸಕ್ರೀಯವಾಗಿರುವ ಈ ಸಂಘಟನೆಗಳ ವಿರುದ್ಧ ಆಯಾ ಸರ್ಕಾರಗಳು ಕ್ರಮ ಕೈಗೊಳ್ಳಲು ಮುಂದಾಗಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ, ಕ್ರಮ ಕೈಗೊಳ್ಳುವುದರ ಬದಲಾಗಿ ಕೇಸ್ ವಾಪಸ್ ಪಡೆದು, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ವೋಟಿಗಾಗಿ ಮುಸ್ಲಿಂ ರನ್ನು ಬಳಸಿಕೊಳ್ಳುತ್ತಿದೆ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.

ಕೇಸು ಹಿಂಪಡೆದಿರುವ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಪಿಎಫ್ ಐ ಮತ್ತು ಕೆಎಫ್ ಡಿ ಸಂಘಟನೆಯ ಚಟುವಟಿಕೆ ಅಪಾಯಕಾರಿಯಾಗಿದೆ. ಶಿವಮೊಗ್ಗದಲ್ಲಿ ಈ ಸಂಘಟನೆಗಳು ರಾಜರೋಷವಾಗಿ ಪಾಕಿಸ್ತಾನದ ಬಾವುಟ ಹಾರಿಸುತ್ತಾರೆ. ಇಂತಹವರ ವಿರುದ್ಧ ಕ್ರಮಕೈಗೊಳ್ಳುವುದರ ಬದಲಾಗಿ ಭಂಡತನದಿಂದ ಮುಸ್ಲಿಂ ಓಟಿಗಾಗಿ ದೇಶಕ್ಕೆ ಅಪಾಯಕಾರಿ ಸಂಘಟನೆಗಳಿಗೆ ನೀರು ಹಾಕಿ ಬೆಳೆಸುತ್ತಿದೆ ಎಂದ ಅವರು, ಸರ್ಕಾರ ಈ ಕೂಡಲೇ, ಕೇಸ್ ವಾಪಸ್ ಪಡೆದಿರುವುದನ್ನು ರದ್ದುಗೊಳಿಸಬೇಕು. ಇಲ್ಲವಾದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.


Spread the love

Exit mobile version