ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಗುಡ್ಡ ಕುಸಿತ; ಸಂಚಾರ ಸ್ಥಗಿತ
ಮಂಗಳೂರು: ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು ಮಂಗಳೂರು ರೈಲು ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸುಬ್ರಹ್ಮಣ್ಯ – ಎಡಕುಮೇರಿ ರೈಲು ಮಾರ್ಗದ ಮಧ್ಯದಲ್ಲಿ ಗುಡ್ಡ ಕುಸಿದಿದ್ದು, ರೈಲು ಸಂಚಾರ ಸ್ಥಗಿತಗೊಂಡಿದೆ.
ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಇದರ ಪರಿಣಾಮವಾಗಿ ಗುಡ್ಡ ಕುಸಿದು ರೈಲು ಹಳಿಗಳ ಮೇಲೆ ಬೃಹತ್ ಗಾತ್ರದ ಮಣ್ಣಿನ ರಾಶಿ ಬಿದ್ದಿದ್ದು, ಇದರಿಂದ ಬೆಂಗಳೂರಿನಿಂದ ಮಂಗಳೂರಿಗೆ ಈಗಾಗಲೇ ಹೊರಟ ರೈಲು ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದೆ ಎಂದು ತಿಳಿದು ಬಂದಿದೆ.
ರೈಲ್ವೆ ಹಳಿಗಳ ಮೇಲೆ ಬಿದ್ದ ಗುಡ್ಡ ಕುಸಿತ ಮಣ್ಣನ್ನು ತೆರವು ಮಾಡುವ ಕಾರ್ಯ ಭರದಿಂದ ಸಾಗುತ್ತಿದ್ದು, ನಾಳೆಯ ಒಳಗಾಗಿ ಮತ್ತೆ ರೈಲು ಸಂಚಾರ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರವಾರ ಯಶವಂತ ಪುರ ರೈಲಿನ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದ್ದು, ಈ ರೈಲು ಕಣ್ಣೂರು-ಪಾಲಕ್ಕಾಡ್,- ಕೊಯಮತ್ತೂರು-ಸೇಲಂ-ಕುಪ್ಪಂ-ಬಂಗಾರಪೇಟೆ ಮೂಲಕ ಬೆಂಗಳೂರಿಗೆ ತಲುಪಲಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.