Home Mangalorean News Kannada News ಬೆಂಗಳೂರು: : ಲೀಲಾಧರ್ ಬೈಕಂಪಾಡಿಯಿಂದ “ಸಮಾಜ ರತ್ನ ರಾಷ್ಟ್ರಿಯ ಪುರಸ್ಕಾರ”  ಸ್ವೀಕಾರ

ಬೆಂಗಳೂರು: : ಲೀಲಾಧರ್ ಬೈಕಂಪಾಡಿಯಿಂದ “ಸಮಾಜ ರತ್ನ ರಾಷ್ಟ್ರಿಯ ಪುರಸ್ಕಾರ”  ಸ್ವೀಕಾರ

Spread the love

ಬೆಂಗಳೂರು: ಜ್ಞಾನ ಮಂದಾರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು ಇವರ 2015ರ ಸಾಲಿನ ‘ಸಮಾಜ ರತ್ನ ರಾಷ್ಟ್ರಿಯ ಪುರಸ್ಕಾರ’ಕ್ಕೆ ಆಯ್ಕೆಗೊಂಡಿರುವ ಬಹ್ರೈನ್ ಮೂಲದ ಯಶಸ್ವಿ ಯುವ ಸಾಧಕ ಹಾಗೂ ಸಮಾಜ ಸೇವಕ ಲೀಲಾಧರ್ ಬೈಕಂಪಾಡಿಯವರು ಇತ್ತೀಚೆಗೆ ಬೆಂಗಳೂರಿನ ಹೇರಂಭಾ ಹೊಟೇಲಿನ ಸಭಾಗೃಹದಲ್ಲಿ ಜರಗಿದ ಸಮಾರಂಭದಲ್ಲಿ ಹಿರಿಯ ಎ.ಐ.ಸಿ.ಸಿ. ಸದಸ್ಯೆ ಶಶಿಕಲಾ ವಿ. ಕವಲಿ ಅವರಿಂದ ಉಪಸ್ಥಿತರಿದ್ದ ಇತರ ಗಣ್ಯರ ಸಮ್ಮುಖದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಳೆದ ಜನವರಿಯಲ್ಲಿ ಮಲೇಷಿಯಾದಲ್ಲಿ ಜರಗಿದ್ದ ಸಮಾರಂಭದಲ್ಲಿ ಸ್ವೀಕರಿಸಬೇಕಾಗಿದ್ದ ಈ ಪ್ರಶಸ್ತಿಯು ವಿಜೇತ ಲೀಲಾಧರ್ ಬೈಕಂಪಾಡಿಯವರ ಅನುಪಸ್ಥಿತಿಯಿಂದಾಗಿ ಈಗ ಬೆಂಗಳೂರಿನಲ್ಲಿ ಪ್ರದಾನಿಸಲ್ಪಟ್ಟಿತು.

Samaaj Ratna - Pic 1

ತನ್ನ ಯಶಸ್ವಿ ನಾಯಕತ್ವ, ಸಾಮಾಜಿಕ ಮತ್ತು ಸಂಘಟನಾ ಕ್ಷೇತ್ರದ ಸೇವೆ-ಸಾಧನೆಗಳಿಗಾಗಿ ಈಗಾಗಲೇ ‘ರಾಷ್ಟ್ರೀಯ ಭೂಷಣ’ ಮತ್ತು ‘ರಾಷ್ಟ್ರೀಯ ಏಕತಾ ಪ್ರಶಸ್ತಿ’ಗಳಂತಹ ಎರಡು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ ಈ ‘ಸಮಾಜ ರತ್ನ’ ಪ್ರಶಸ್ತಿಯು ಸರದಿಯಲ್ಲಿ ಬಂದ ಮೂರನೆಯ ರಾಷ್ಟ್ರ ಮಟ್ಟದ ಪುರಸ್ಕಾರವಾಗಿರುತ್ತದೆ. ಹೀಗಾಗಿ ಈ ಯಶಸ್ಸಿನೊಂದಿಗೆ ಇವರು ಕೇವಲ ಒಂದು ವರ್ಷದ ಅವಧಿಯೊಳಗೆ ಸರಣಿಯಲ್ಲಿ ತ್ರಿವಳಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಸ್ವೀಕರಿಸಿದ ಸಮಗ್ರ ಕೊಲ್ಲಿಯ ಇಲ್ಲವೆ ಬಹ್ರೈನ್ ಮೂಲದ ಪ್ರಥಮ ಅನಿವಾಸಿ ಭಾರತೀಯ ತಥಾ ಕನ್ನಡಿಗ ಎಂಬ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ಕಳೆದ ಒಂದೂವರೆ ದಶಕದಿಂದ ಬಹ್ರೈನ್ ವಾಸ್ತವ್ಯವಿರುವ ಲೀಲಾಧರ್ ಬೈಕಂಪಾಡಿಯವರು ಬಹ್ರೈನ್ ಮಾತ್ರವಲ್ಲದೆ ಅವಿಭಜಿತ ದ.ಕ. ಜಿಲ್ಲೆ, ಬೆಂಗಳೂರು ಮತ್ತು ಮುಂಬೈಯಲ್ಲೂ ವಿವಿಧ ಸಮೂಹ ಮತ್ತು ಸಂಘಟನೆಗಳ ಮೂಲಕ ತುಳುವರು, ಕನ್ನಡಿಗರು ಹಾಗೂ ಭಾರತೀಯರಿಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ, ಸಾಂಘಿಕ, ಸಾಹಿತ್ಯಿಕ ಹಾಗೂ ಜನಪರ ಸೇವಾ ಕಾರ್ಯಗಳಲ್ಲಿ ಸದಾ ನಿರತರಾಗಿದ್ದಾರೆ. ನಾಡು ಮತ್ತು ಹೊರನಾಡಿನಲ್ಲಿ ಕೆಲವು ಸಾಮಾಜಿಕ ಸಂಘಟನೆಗಳ ಸ್ಥಾಪನೆಗೂ ಕಾರಣರಾಗಿರುವ ಇವರು ತನ್ನದೇ ಸಂಚಾಲಕತ್ವದ ಕಾಂಚನ್ ಪ್ರತಿಷ್ಠಾನದ ಮೂಲಕವೂ ಆಗಾಗ ವೈವಿಧ್ಯಮಯ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಗೈಯುತ್ತಿರುತ್ತಾರೆ. ಬಹ್ರೈನ್‍ನಲ್ಲಿ ಇಂಡಿಯನ್ ಕ್ಲಬ್, ಕರ್ನಾಟಕ ಸೋಶಿಯಲ್ ಕ್ಲಬ್, ಮಹಾರಾಷ್ಟ್ರ ಕಲ್ಚರಲ್ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ಇವರು ಸದ್ಯ ಮೊಗವೀರ್ಸ್ ಬಹ್ರೈನ್ ಸಂಸ್ಥೆಯ ದಶಮಾನೋತ್ಸವ ಅವಧಿಯ ಅಧ್ಯಕ್ಷರಾಗಿಯೂ ಸದಾ ಕ್ರಿಯಾಶೀಲರಾಗಿದ್ದಾರೆ.

 ಲೀಲಾಧರ್ ಬೈಕಂಪಾಡಿಯವರು ಗತ ಸುಮಾರು ಎರಡೂವರೆ ದಶಕಕ್ಕೂ ಹೆಚ್ಚಿನ ಕಾಲ ನಾಡು-ನುಡಿ, ಸಂಘಟನೆ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ನಿರಂತರವಾಗಿ ನೀಡುತ್ತಾ ಬಂದ ಅಮೋಘ ಕೊಡುಗೆಗಳಿಗಾಗಿ ಅವರನ್ನು ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿಯು ಈ ‘ಸಮಾಜ ರತ್ನ ರಾಷ್ಟ್ರೀಯ ಪುರಸ್ಕಾರ’ಕ್ಕೆ ಆಯ್ಕೆಗೊಳಿಸಿದ್ದು, ತತ್ಸಂಬಂಧಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಎಚ್. ಸೋಮಶೇಖರ್, ಮಹೇಶ್ ಕುಮಾರ್ ಟಿ.ಜೆ. [ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ], ಎಂ.ಜೆ. ರಾವ್ [ಸಂಪಾದಕರು, ಸುಮ-ಸೌರಭ] ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದು ವಿಜೇತರ ಸಮ್ಮಾನಕ್ಕೆ ಜತೆ ನೀಡಿದರು.


Spread the love

Exit mobile version