ಬೆಂಗ್ರೆಯಲ್ಲಿ ಶಾಸಕ ಕಾಮತ್ ರಿಂದ ಡೋರ್ ನಂಬ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆ ಪರಿಸರದ ಸುಮಾರು 250 ಮನೆಗಳಿಗೆ ಡೋರ್ ನಂಬ್ರ ನೀಡುವ ಕಾರ್ಯಕ್ರಮಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸೋಮವಾರ ಚಾಲನೆ ನೀಡಿದರು.
ಮಂಗಳೂರಿನ ನಿಲೇಶ್ವಾಲ್ಯ ಮೊಗವೀರ ಭವನದ ನೂತನ ಕಟ್ಟಡದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಡಿ ವೇದವ್ಯಾಸ ಕಾಮತ್ ಬೆಂಗರೆ ಪ್ರದೇಶದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ತಮ್ಮೊಂದಿಗೆ ಸಹಕರಿಸಿದ ಕಂದಾಯ ಅಧಿಕಾರಿ ಗಳಿಗೆ ಕೃತಜ್ಞತೆ ಸಲ್ಲಿಸಿದರು. ಬೆಂಗ್ರೆಯಲ್ಲಿ ಎಂಸಿಎಫ್ ಕಂಪೆನಿಯ ಸಾಮಾಜಿಕ ಬದ್ಧತಾ ನಿಧಿಯ ಅಡಿಯಲ್ಲಿ ಅಂದಾಜು 30 ಲಕ್ಷ ರೂಪಾಯಿ ವೆಚ್ಚದಲ್ಲಿ ತುರ್ತು ಚಿಕಿತ್ಸಾ ಘಟಕ ನಿರ್ಮಾಣಕ್ಕೆ ಈಗಾಗಲೇ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು. ಅದರ ಬಳಿಕ ಪೂರ್ಣಕಾಲಿಕ ವೈದ್ಯರನ್ನು ಕೂಡ ನೇಮಿಸಲು ಕ್ರಮ ಕೈಗೊಳ್ಳಲಿದ್ದೇನೆ ಎಂದು ಹೇಳಿದ ಶಾಸಕ ಕಾಮತ್, ಅಂಗನವಾಡಿ ಕಟ್ಟಡದ ನಿರ್ಮಾಣ ಕೂಡ ಶೀಘ್ರದಲ್ಲಿ ಆಗಲಿದೆ ಎಂದರು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಧಿಯ ಅಡಿಯಲ್ಲಿ ಕಸಬಾ ಬೆಂಗ್ರೆಯಲ್ಲಿ ಈಗಾಗಲೇ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗಳು ನಡೆಯುತ್ತಿವೆ. ಮೊಗವೀರ ಭವನದ ಹೊಸ ಕಟ್ಟಡಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅಡಿಯಲ್ಲಿ 5 ಲಕ್ಷ ರೂಪಾಯಿ ನೀಡಲು ಜಿಲ್ಲಾಧಿಕಾರಿಗಳಿಗೆ ನೀಡುವ ಪಟ್ಟಿಯಲ್ಲಿ ಆದ್ಯತೆಯಾಗಿ ಸೇರಿಸಿದ್ದೇನೆ. ಜಿಲ್ಲಾಧಿಕಾರಿಗಳಿಂದ ಪಟ್ಟಿಗೆ ಮಂಜೂರಾತಿ ಸಿಕ್ಕಿದ ತಕ್ಷಣ ಅನುದಾನ ಬಿಡುಗಡೆಯಾಗುವುದು ಎಂದು ತಿಳಿಸಿದರು.
ಹಕ್ಕುಪತ್ರ ಸಿಕ್ಕಿದವರು ಡೋರ್ ನಂಬ್ರ ಪಡೆದುಕೊಳ್ಳಬೇಕು. ಡೋರ್ ನಂಬ್ರ ಸಿಕ್ಕಿದವರು ಖಾತಾ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಅವರ ಕೆಲಸ ಶೀಘ್ರ ಆಗುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದ ಶಾಸಕ ಕಾಮತ್ ನಂತರ ತುರ್ತು ಪರಿಸ್ಥಿತಿಯಲ್ಲಿ ಬ್ಯಾಂಕ್ ಸಾಲ ಪಡೆದುಕೊಳ್ಳಲು ಫಲಾನುಭವಿಗಳಿಗೆ ಅವಕಾಶ ಸಿಗಲಿದೆ ಎಂದು ತಿಳಿಸಿದರು. ಕಸಬಾ ಬೆಂಗ್ರೆ ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮಗಳಲ್ಲಿ ಕಲಿಸುವ ಮೂಲಕ ಅನೇಕ ಮಕ್ಕಳಿಗೆ ಸಹಾಯವಾಗಿದೆ ಎಂದು ಶಾಸಕ ಕಾಮತ್ ಹೇಳಿದರು.
ಸ್ಮಶಾನಕ್ಕೆ ಸೂಕ್ತ ಜಾಗ ಗುರುತಿಸುವಂತೆ ಸ್ಥಳೀಯರಿಗೆ ಸೂಚಿಸಿದ ಶಾಸಕ ಕಾಮತ್ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ತಕ್ಷಣ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೊಗವೀರ ಮುಖಂಡರಾದ ಮೋಹನ್ ಬೆಂಗ್ರೆ, ಮಾಜಿ ಮನಪಾ ಸದಸ್ಯರಾದ ಮೀರಾ ಕರ್ಕೇರಾ, ರಘುವೀರ್ ಪಣಂಬೂರು, ಸ್ಥಳೀಯ ಮುಖಂಡರಾದ ನವೀನ್ ಸುವರ್ಣ, ಗಂಗಾಧರ ಸಾಲಿಯಾನ್, ಅಧಿಕಾರಿಗಳಾದ ಯಾದವ್ ಎಚ್, ಬಾಬು ನಾಯಕ್, ಮನಮೋಹಿನಿ ಹಾಗೂ ಅನೇಕ ಕಾರ್ಯಕರ್ತರು, ಫಲಾನುಭವಿಗಳು ಉಪಸ್ಥಿತರಿದ್ದರು.