ಬೆಲೆ ಏರಿಕೆ ಬಗ್ಗೆ ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ – ರಮೇಶ್ ಕಾಂಚನ್
ಉಡುಪಿ: ಬೆಲೆ ಏರಿಸಿ ಜನರ ಬದುಕು ದುಸ್ತರವಾಗಲು ಕಾರಣವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಜ್ಯ ಬಿಜೆಪಿಯವರು ಮೊದಲು ಸರಿಯಾಗಿ ತರಾಟೆಗೆ ತೆಗೆದುಕೊಳ್ಳಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.
ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಗಗನಕ್ಕೇರಿದ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಇಳಿಸದೆ ಜನರನ್ನು ವಂಚಿಸುತ್ತಿದ್ದೆ. ಇಂಧನಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಹಲವಾರು ವಸ್ತುಗಳ ಬೆಲೆ ಏರಿಕೆಯಾಗಿದೆ.
ಗ್ಯಾಸ್ ಸಿಲಿಂಡರ್ ದರ ಹೆಚ್ಚಳ,ಟೋಲ್ ದರ ಏರಿಕೆ, ಆರೋಗ್ಯ ವಿಮೆ ಮೇಲೆ ಶೇಕಡಾ 18 ಜಿ.ಎಸ್.ಟಿ, ಜೀವವಿಮೆಯ ಮೇಲೂ ಜಿ.ಎಸ್.ಟಿ ಹೇರಿಕೆ, ಅಗತ್ಯದ ಔಷಧಿ, ಬ್ಯಾಂಕ್ ಸೇವಾ ಶುಲ್ಕ, ತರಕಾರಿ ಬೇಳೆಕಾಳುಗಳು ಹಾಗೂ ಅಡುಗೆಗೆ ಸಂಬಂಧಿಸಿದ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಳಪೆ ಅರ್ಥಿಕ ನೀತಿಯಿಂದಾಗಿ ಹಣದುಬ್ಬರವೂ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅನ್ಯಾಯವೆಸುಗುತ್ತಿದ್ದೆ.
ಈ ಹಿಂದೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರ ಸಮಸ್ಯೆಯ ಪರಿಹಾರಕ್ಕಾಗಿ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಘೋಷಿಸಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ಬಂದ ದಿನದಿಂದ ಇಂದಿನವರೆಗೂ ಆ ಪಂಚ ಗ್ಯಾರಂಟಿಗಳನ್ನು ಯಥಾವತ್ತಾಗಿ ರಾಜ್ಯದ ಜನರಿಗೆ ನೀಡುವ ಮೂಲಕ ಅವರು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ.ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯವರು ತಮ್ಮ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ಎಂಬುದನ್ನು ಅರ್ಥೈಸಿಕೊಂಡು ತಮ್ಮ ಜನಾಕ್ರೋಶ ಯಾತ್ರೆಯನ್ನು ಕೇಂದ್ರ ಸರ್ಕಾರದ ವಿರುದ್ಧವೇ ನಡೆಸುವಂತೆ ರಮೇಶ್ ಕಾಂಚನ್ ಒತ್ತಾಯಿಸಿದ್ದಾರೆ.