ಬೆಳಕು ಮೀನುಗಾರಿಕೆ ಕಡ್ಡಾಯ ನಿಷೇಧ – ಮೀನುಗಾರಿಕೆ ಸಚಿವ ನಾಡಗೌಡ
ಉಡುಪಿ: ಸಮುದ್ರದಲ್ಲಿ ಬೆಳಕು ಮೀನುಗಾರಿಕೆ ಯನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತಂತೆ ಕಾರ್ಯದರ್ಶಿರವರ ಮೂಲಕ ಏಕರೂಪದ ಆದೇಶ ಜಾರಿಗೊಳಿಸಲಾಗುವುದು ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಅವರು ಬುಧವಾರ , ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ , ಮೀನುಗಾರಿಕಾ, ಬಂದರು ಹಾಗೂ ಪಶು ಪಾಲನ ಇಲಾಖಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಸಮುದ್ರ ವ್ಯಾಪ್ತಿಯಲ್ಲಿ ಬೆಳಕು ಮೀನುಗಾರಿಕೆ ನಿಷೇಧವಿದ್ದರೂ ಸಹ ಕರಾವಳಿಯ ಕೆಲವೆಡೆ ಬೆಳಕು ಮೀನುಗಾರಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಕುರಿತಂತೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಜಿಲ್ಲಾದಿಕರಿಗಳಿಗೆ ಆದೇಶ ತಲುಪಿಸಲಾಗುವುದು, ಮುಂದಿನ ತಿಂಗಳು ಆರಂಭವಾಗುವ ಮೀನುಗಾರಿಕಾ ಋತುವಿನಿಂದ ಇದನ್ನು ಕಡ್ಡಾಯವಾಗಿ ಕರಾವಳಿ ವ್ಯಾಪ್ತಿಯ ಎಲ್ಲಾ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದ ಸಚಿವರು, ಈ ಕುರಿತಂತೆ ಅಧಿಕಾರಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಅವರು, ಕರಾವಳಿ ಪೊಲೀಸ್ ಪಡೆ ಮತ್ತು ಕೋಸ್ಟ್ ಗಾರ್ಡ್ ಗೆ ಈ ಕುರಿತು ಸೂಕ್ತ ಸೂಚನೆ ನೀಡಲು ಪ್ರತ್ಯೇಕ ಸಭೆ ಕಡೆಯುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ತಿಳಿಸಿದರು.
ಮತ್ಯಾಶ್ರಯ ಯೋಜನೆಯಡಿ ನಿರ್ಮಿಸಲಗುವ ಮನೆಗಳನ್ನು ರಾಜೀವ ಗಾಂಧೀ ಅಭಿವೃದ್ದಿ ನಿಗಮದ ಮೂಲಕ ಅನುಷ್ಠಾನಗೊಳಿಸದೇ, ಮೀನುಗಾರಿಕೆ ಇಲಾಖೆಯಿಂದಲೇ ಅನುಷ್ಠಾನಗೊಳಿಸುವ ಕುರಿತಂತೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಸಮುದ್ರದಲ್ಲಿ ತೇಲುವ ಜೆಟ್ಟಿ ನಿರ್ಮಾಣ ಮಾಡುವ ಕುರಿತಂತೆ ಈಗಾಗಲೇ ಗೋವಾ ರಾಜ್ಯದಲ್ಲಿ ಈ ಮಾದರಿಯ ಜೆಟ್ಟಿಗಳ ನಿರ್ಮಾಣ ನಡೆದಿದ್ದು ಸಮರ್ಪಕವಾಗಿ ಬಳಕೆಯಾಗುತ್ತಿದೆ, ರಾಜ್ಯದ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಿ , ಅಲ್ಲಿ ನಿರ್ಮಣಗೊಂಡಿರುವ ಜೆಟ್ಟಿಗಳ ಗುಣಮಟ್ಟ ಮತ್ತು ರಾಜ್ಯದಲ್ಲಿ ಇದರ ನಿರ್ಮಾಣ ಸಾದ್ಯತೆಯ ಬಗ್ಗೆ ವರದಿ ಪಡೆದು ರಾಜ್ಯದಲ್ಲಿಯೂ ಅನುಷ್ಠಾನ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಪ್ರಗತಿ ಹಂತದಲ್ಲಿರುವ ಮತ್ತು ಪೂಣ್ಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಕೆಲವಡೆಗಳಲ್ಲಿ ನಿಯಮ ಮೀರಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದರು , ಅಧಿಕಾರಿಗಳು ಯಾವುದೇ ಕಾರಣಕ್ಕೂ ಯೋಜನೆಗಳನ್ನು ಅನುಮತಿ ಪಡೆಯದೇ ಬದಲಾಯಿಸದಂತೆ ಸೂಚಿಸಿದಿರು.
ಜಿಲ್ಲೆಯ ಮಲ್ಪೆಯಲ್ಲಿ 50 ಕೋಟಿ ರೂ ವೆಚ್ಚದ 3 ನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ, ಗಂಗೊಳ್ಳಿಯಲ್ಲಿ 102 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬ್ರೇಕ್ ವಾಟರ್ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಈ ತಿಂಗಳು ಪೂರ್ಣಗೊಳ್ಳಲಿದೆ, ಕೋಡಿ ಕನ್ಯಾನದಲ್ಲಿ 6.48 ಕೋಟಿ ರೂ ವೆಚ್ಚದ ಡ್ರಜ್ಜಿಂಗ್ ಕಾಮಗಾರಿ ಪ್ರಗತಿಯಲ್ಲಿದೆ, ಹೆಜಮಾಡಿಯಲ್ಲಿ 139 ಕೋಟಿ ರೂ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಬಂದು ಕಾಮಗಾರಿ ಮಂಜೂರಾತಿ ಹಂತದಲ್ಲಿದೆ ಎಂದು ಬಂದರು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದಿಂದ ಮಂಜೂರಾತಿಗೆ ಬಾಕಿ ಇರುವ ಕಾಮಗಾರಿಗಳ ಮತ್ತು ಹಣ ಬಿಡುಗಡೆಯ ಕುರಿತಂತೆ ವಿವರಗಳನ್ನು ಸಲ್ಲಿಸುವಂತೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕರಿ ಅನುರಾಧ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ಹೆಚ್. ಎಸ್. ವೀರಪ್ಪ ಗೌಡ, ಜಂಟಿ ನಿರ್ದೇಶಕ ದೊಡ್ಡಮನಿ, ಉಡುಪಿ ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾಶ್ರ್ವನಾಥ್ , ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ ಮತ್ತಿತರರು ಉಪಸ್ಥಿತರಿದ್ದರು.