ಬೆಳಗಾವಿ ಬಳಿಕ ಉಡುಪಿಯಲ್ಲೂ ಪೊಲೀಸ್-ಸೇನೆಯ ನಡುವೆ ಮಾತಿನ ಚಕಮಕಿ – ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್
ಉಡುಪಿ: ಇತ್ತೀಚೆಗೆ ಬೆಳಗಾವಿಯ ಯಕ್ಸಂಬಾದಲ್ಲಿ ಇಬ್ಬರು ಪೋಲೀಸ್ ಪೇದೆಗಳಿಗೆ ಹಲ್ಲೆ ನಡೆಸಿದ ಸಿ ಆರ್ ಪಿ ಎಫ್ ಯೋಧನ ಸುದ್ದಿಯ ಬಳಿಕ ಈಗ ಉಡುಪಿಯಲ್ಲೂ ಕೂಡ ಸೇನೆಯ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಲಾಕ್ ಡೌನ್ ವಿಚಾರದಲ್ಲಿ ನಡೆಯುತ್ತಿರುವ ಮಾತಿನ ಚಕಮಕಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆದಿ ಉಡುಪಿ ಬಳಿ ಇರುವ ಹೆಲಿಪ್ಯಾಡ್ ನಲ್ಲಿನ ಎನ್ ಸಿ ಸಿ ಮೈದಾನದಲ್ಲಿ ಲಾಕ್ ಡೌನ್ ಆದೇಶ ಪಾಲನೆ ಮಾಡದಿರುವ ವಿಚಾರದಲ್ಲಿ ಪೊಲೀಸರು ಮತ್ತು ಸೈನಿಕರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವೀಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿದೆ. ಎನ್ ಸಿ ಸಿ ಮೈದಾನದಲ್ಲಿ ಗುಂಪುಗೂಡಿಕೊಂಡು ಕಬಡ್ಡಿ ಮತ್ತು ವಾಲಿಬಾಲ್ ಆಡುವ ಸೈನಿಕರನ್ನು ಪ್ರಶ್ನಿಸಲು ಬಂದ ಪೊಲೀಸ್ ಅಧಿಕಾರಿ ಜೊತೆ ಸೈನಿಕರು ವಾಗ್ವಾದ ನಡೆಸುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಸುಮಾರು ಒಂದು ತಿಂಗಳ ಹಿಂದೆ ನಡೆದಿತ್ತು ಎನ್ನಲಾದ ವೀಡಿಯೋದಲ್ಲಿ ನಮ್ಮ ಬೇಲಿ ದಾಟಿ ಒಳಗೆ ನೀವು ಯಾರೂ ಬರಕೂಡದುರಾಜ್ಯ ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ನಮ್ಮನ್ನು ಪ್ರಶ್ನಿಸುವ ಹಕ್ಕು ಇಲ್ಲ ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜೊತೆ ಸೈನಿಕನೋರ್ವರು ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಜನರಿಗೆ ಅನ್ವಯವಾಗುವ ಕಾನೂನು ಈ ಸೈನಿಕರಿಗೆ ಇಲ್ಲವೇ ಅವರು ಆಡಬಹುದಾದರೆ ನಾವ್ಯಾಕೆ ಆಡಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಕೆಲವು ವರ್ಷಗಳ ಕೆಳಗೆ ಆಗಿನ ಜಿಲ್ಲಾಧಿಕಾರಿ ಅವರು ಕೆಲಸ ನಿಮಿತ್ತ ಹೆಲಿಪ್ಯಾಡ್ ಮೈದಾನಕ್ಕೆ ಮಾಧ್ಯಮಗಳ ಜೊತೆ ಬಂದ ವೇಳೆ ಸಹ ಇಲ್ಲಿನ ಸೈನಿಕರು ಅವರಿಗೆ ಗೇಟ್ ತೆಗೆಯದೆ ತಗಾದೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.