ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ನಡುವೆ ನಡೆದ ಹೊಡೆದಾಟದಲ್ಲಿ ನಾಲ್ಕು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಸಂಜೆ ನಡೆದಿದೆ.
ಆಸ್ಪತ್ರೆಗೆ ದಾಖಲಾದವರುನ್ನು ಗಾಯಾಳುಗಳಾದ ಕಾರು ಪ್ರಯಾಣಿಕರಾದ ಉಜಿರೆ ಗುರಿಪಳ್ಳ ನಿವಾಸಿಗಳಾದ ಉಮೇಶ್ ಪೂಜಾರಿ (30), ಸಂದೇಶ್ (24), ಅರವಿಂದ ಶೆಟ್ಟಿ (25), ಲೋಕೇಶ್ (24)ಎಂದು ಗುರುತಿಸಲಾಗಿದೆ. ನಾಲ್ವರು ಗಾಯಾಳುಗಳು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಿದ್ದು ಆಗಾಗ ಟ್ರಾಫಿಕ್ ಜಾಮ್ ಮಾಮೂಲಾಗಿದೆ. ಶಿರಾಡಿ ಘಾಟಿ ರಸ್ತೆ ಕಾಮಗಾರಿ ಪೂರ್ಣಗೊಂಡು ಇನ್ನೂ ತೆರೆವಾಗದ ಹಿನ್ನೆಲೆಯಲ್ಲಿ ಈ ಘಾಟಿಯಲ್ಲಿ ವಾಹನಗಳ ಭರಾಟೆ ಹೆಚ್ಚಿದೆ. ರವಿವಾರ ಮೂರು ವಾಹನಗಳ ಪ್ರಯಾಣಿಕರ ಮಧ್ಯೆ ದಾರಿ ಬಿಟ್ಟುಕೊಡುವ ವಿಚಾರದಲ್ಲಿ ಗಲಾಟೆ ನಡೆದಿದೆ. ಒಂದು ವಾಹನ ಹೋಗುವಾಗ ಇನ್ನೊಂದು ವಾಹನ ಸ್ವಲ್ಪ ತಾಗಿದೆ. ಆಗ ಒಂದು ಬಸ್ಸಿನ ಚಾಲಕ ಕಾರಿನ ಚಾಲಕನಿಗೆ ಹಲ್ಲೆ ಮಾಡಿದ. ಅದನ್ನು ನೋಡಿ ಇನ್ನೊಂದು ಕಾರಿನವರು ಬಸ್ಸಿನವರಿಗೆ ಹಲ್ಲೆ ಮಾಡಿದರು ಎನ್ನಲಾಗಿದೆ. ಒಟ್ಟು ಘಟನೆಯಿಂದ ಘಾಟಿಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. 3 ತಾಸಿಗೂ ಅಧಿಕ ಕಾಲ ಘಾಟಿ ರಸ್ತೆ ತಡೆ ಉಂಟಾಗಿತ್ತು. ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಸಂಚಾರವನ್ನು ಸುಗಮಗೊಳಿಸಿದ್ದಾರೆ ಅಲ್ಲದೆ ಒಂದು ವಾಹನವನ್ನು ಜಪ್ತಿ ಮಾಡಲಾಗಿದೆ.