Home Mangalorean News Kannada News ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದೇವಗಿರಿ ಜನರಿಗೆ ದೇವರೇ ಗತಿ!  ಇಲ್ಲಿ ಆನ್ಲೈನ್ ಕ್ಲಾಸ್ ಬಿಡಿ,...

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದೇವಗಿರಿ ಜನರಿಗೆ ದೇವರೇ ಗತಿ!  ಇಲ್ಲಿ ಆನ್ಲೈನ್ ಕ್ಲಾಸ್ ಬಿಡಿ, ಫೋನ್ ಕಾಲ್ ಕೂಡ ಅಸಾಧ್ಯ!  

Spread the love

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದೇವಗಿರಿ ಜನರಿಗೆ ದೇವರೇ ಗತಿ!  ಇಲ್ಲಿ ಆನ್ಲೈನ್ ಕ್ಲಾಸ್ ಬಿಡಿ, ಫೋನ್ ಕಾಲ್ ಕೂಡ ಅಸಾಧ್ಯ!  

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಕನಸಿನ ‘ಡಿಜಿಟಲ್ ಇಂಡಿಯಾ’ಒಂದು ಕಡೆಯಾದ್ರೆ, ಇತ್ತ ನೆರಿಯ ಗ್ರಾಮದ ದೇವಗಿರಿ ಜನ ಒಂದು ಫೋನ್ ಕಾಲ್‍ಗೂ ಹರಸಾಹಸ ಪಡುತ್ತಿದ್ದಾರೆ.

ಗ್ರಾಮದಲ್ಲಿ ಹಲವು ಸಮಯಗಳಿಂದ ನೆಟ್‌ವರ್ಕ್‌ ಸಮಸ್ಯೆಯಿದೆ. ಏನಾದರೂ ತೊಂದರೆಗಳು, ಘಟನೆಗಳು ಉಂಟಾದಲ್ಲಿ ಗ್ರಾಮಸ್ಥರು ತೀರಾ ಸಂದಿಗ್ಧ ಪರಿಸ್ಥಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸುವುದೇ ತ್ರಾಸದಾಯಕವಾಗಿದೆ. ಈ ಹಿಂದೆ ಇಲ್ಲಿ ಬಿಯಸ್‍ಯನ್‍ಯಲ್ ನೆಟವರ್ಕ್ ಇತ್ತು. ಆದರೆ ಇದೀಗ ಅದು ಕೂಡ ಸ್ತಬ್ಧವಾಗಿದೆ‌. ಇನ್ನು ಇವರಿಗೆ 3ಜಿ, 4ಜಿ ಸೇವೆಗಳು ಕನಸಿನ ಮಾತಾಗಿಯೇ ಉಳಿದಿದೆ.

ಸುಮಾರು 500 ರಷ್ಟು ಕುಟುಂಬಗಳು ವಾಸವಾಗಿರುವ ಈ ಪ್ರದೇಶದ ಜನ ಹೊರಜಗತ್ತಿನ ಸಂಪರ್ಕವೇ ಸಾಧ್ಯವಾಗದೆ ಆತಂಕಿತರಾಗಿದ್ದಾರೆ.‌ ಅದರಲ್ಲೂ ಅಂಬಟ್ಟಮಲೆ ಭಾಗದಲ್ಲಿ 30 ಮಲೆಕುಡಿಯ ಕುಟುಂಬಗಳು ವಾಸಿಸುತ್ತಿದ್ದು ಅವರು ನೆಟ್‍ವರ್ಕ್ ಹುಡುಕಿಕೊಂಡು ಕಿಲೋಮೀಟರ್‍ಗಟ್ಟಲೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ‌.

ಕಳೆದ ಮಳೆಗಾಲ ಈ ಪ್ರದೇಶ ನೆರೆ ಹಾವಳಿಯಿಂದಾಗಿ ಭಾರಿ ಸಂಕಷ್ಟಕ್ಕೆ ಒಳಗಾಗಿತ್ತು‌‌. ಜನ ಮನೆಯಿಂದ ಹೊರಬರಲಾಗದೆ ಪರಿತಪಿಸುವಂತಾಗಿತ್ತು‌. ಇದೀಗ ಈ ಬಾರಿ ಆ ನೆಟ್‍ವರ್ಕ್ ಕೂಡ ಕೈಕೊಟ್ಟಿದ್ದು ಇಲ್ಲಿನ ಗ್ರಾಮಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ‌.

ಆನ್ಲೈನ್ ಕ್ಲಾಸ್ ಬರೀ ಕನಸಷ್ಟೇ:
ಕೊರೋನಾದಿಂದಾಗಿ ಶಾಲಾ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು ಅದೆಲ್ಲಾದರು ಕಾರ್ಯರೂಪಕ್ಕೆ ಬಂದರೆ ದೇವಗಿರಿಯ ಮಕ್ಕಳಿಗಂತೂ ದೇವರೇ ಗತಿ. ಈ ಭಾಗದ ಹಲವಾರು ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದು ನೆಟ್‍ವರ್ಕ್ ಸಮಸ್ಯೆಯಿಂದಾಗಿ ಅವರ ಪೋಷಕರು ಆತಂಕಿತರಾಗಿದ್ದಾರೆ‌. ಇನ್ನು ಕೆಲ ಶಿಕ್ಷಕರು ಈ ಭಾಗದಲ್ಲಿದ್ದಾರೆ‌. ಅವರು ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲಿ ಬೋಧಿಸಲು ಪಕ್ಕದ ಗ್ರಾಮಕ್ಕೆ ತೆರಳುತ್ತಿದ್ದಾರೆ.

ಗ್ರಾಮೀಣ ಪ್ರದೇಶವಾದ ಇಲ್ಲಿ ನೆಟ್‌ವರ್ಕ್‌ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಅಥವಾ ಖಾಸಗಿಯವರು ಈ ಭಾಗಕ್ಕೆ ನೆಟ್‌ವರ್ಕ್‌ ವ್ಯವಸ್ಥೆ ಮಾಡಿದಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದು. ಈ ಬಗ್ಗೆ ಈ ಭಾಗದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರು ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಈ ಭಾಗದ ನಾಗರಿಕರು.


Spread the love

Exit mobile version