ಬೆಳ್ತಂಗಡಿ : ವನಮಹೋತ್ಸವ ನಿತ್ಯೋತ್ಸವವಾಗಬೇಕು – ಶಾಸಕ ಕೆ. ವಸಂತ ಬಂಗೇರ

Spread the love

ಬೆಳ್ತಂಗಡಿ : ಕಾಲ ಕಾಲಕ್ಕೆ ಮಳೆ-ಬೆಳೆ ಚೆನ್ನಾಗಿ ಆಗಬೇಕಾದರೆ ವನ ಸಂಪತ್ತನ್ನು ಉಳಿಸಿ ಬೆಳೆಸಿ ಸಂರಕ್ಷಣೆ ಮಾಡಬೇಕು. ವನಮಹೋತ್ಸವ ನಿತ್ಯೋತ್ಸವವಾಗಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಧರ್ಮಸ್ಥಳ ಗ್ರಾಮದ ಕನ್ಯಾಡಿ ಶಾಲೆಯಲ್ಲಿ ಮಂಗಳವಾರ ಅರಣ್ಯ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾದ ಬೆಳ್ತಂಗಡಿ ತಾಲ್ಲೂಕು ಮಟ್ಟದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವಿದ್ಯಾರ್ಥಿಗಳು ವರ್ಷಕ್ಕೆ ಕನಿಷ್ಟ 5 ಗಿಡಗಳನ್ನು ನೆಟ್ಟು ಬೆಳೆಸಬೇಕು. ಪರಿಸರ ಪ್ರೇಮದೊಂದಿಗೆ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

1-vanamahotsava 2-vanamahotsava-001 3-vanamahotsava-002 4-vanamahotsava-003 5-vanamahotsava-004 6-vanamahotsava-005

ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್. ಅಬ್ಬಾಸ್ ಮಾತನಾಡಿ, ಕಾಡಿನ ಪ್ರಮಾಣ ಕಡಿಮೆಯಾದಾಗ ಹವಾಮಾನ ವೈಪರೀತ್ಯದೊಂದಿಗೆ ಪ್ರಾಕೃತಿಕ ವಿಕೋಪಗಳಾಗುತ್ತವೆ. ಜಾಗತಿಕ ತಾಪಮಾನ ಏರಿಕೆಯಾಗಿ ಅನೇಕ ರೋಗ ರುಜಿನಗಳು ಬರುತ್ತವೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ವನದರ್ಶನ:  ಅರಣ್ಯ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು. ವಿದ್ಯಾರ್ಥಿಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ವಿವಿಧ ಗಿಡ-ಮೂಲಿಕೆಗಳು, ಮರಗಳು ಹಾಗೂ ಪ್ರಾಣಿ-ಪಕ್ಷಿಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಜನಾಂಗವಾಗಿದ್ದು ಅವರಿಗಾಗಿ ಈ ಭೂಮಿ ಮತ್ತು ಪ್ರಕೃತಿಯನ್ನು ಸುಸ್ಥಿತಿಯಲ್ಲಿಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ವನಮಹೋತ್ಸವ ಆಚರಣೆಯೊಂದಿಗೆ ಪರಿಸರ ನಾಶ ತಡೆಗಟ್ಟಿ ಗಿಡ ಮರಗಳನ್ನು ಬೆಳೆಸಿ ರಕ್ಷಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗಿಡ ಮರ ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತದೆ.  ತಾಲ್ಲೂಕಿನಲಲಿ ಪ್ರತಿಯೊಬ್ಬರ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಅದನ್ನು ಪ್ರೀತಿಯಿಂದ ರಕ್ಷಿಸಿ ಬೆಳೆಸುವ ಹೊಣೆಗಾರಿಕೆ ಅವರಿಗೆ ನೀಡಲಾಗಿದೆ.

7-vanamahotsava-006 8-vanamahotsava-007

ಧರ್ಮಸ್ಥಳದಲ್ಲಿ ಮತ್ತು ಇತರ ಅಂಗ ಸಂಸ್ಥೆಗಳಲ್ಲಿ ಮರವನ್ನು ಬಳಸದೆ ಕಟ್ಟಡ ನಿರ್ಮಿಸಲಾಗುತ್ತದೆ. ಸಿಮೆಂಟಿನ ಕಿಟಕಿ, ಬಾಗಿಲು ಹಾಗೂ ದಾರಂದಗಳನ್ನು ಬಳಸಲಾಗುತ್ತದೆ ಎಂದರು.  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಈ ವರ್ಷ ಪರಿಸರ ಸಂರಕ್ಷಣೆಗಾಗಿ ಮೂರು ಸಾವಿರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು  ಮತ್ತು ಗಿಡಗಳನ್ನು ವಿತರಿಸಿದರು

ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಅಚ್ಚುತ ಪೂಜಾರಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್..ಎಚ್. ಮಂಜುನಾಥ್, ಯೋಜನಾಧಿಕಾರಿ ರೂಪಾ ಜೈನ್ ಉಪಸ್ಥಿತರಿದ್ದರು.  ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್. ಅಬ್ಬಾಸ್, ಶಾಸಕ ಕೆ. ವಸಂತ ಬಂಗೇರ ಉಪಸ್ಥಿತರಿದ್ದರು.


Spread the love