ಬೆಳ್ತಂಗಡಿ: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ- ಸ್ಥಳದಲ್ಲೇ ಮೂವರ ಸಾವು

Spread the love

ಬೆಳ್ತಂಗಡಿ: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ- ಸ್ಥಳದಲ್ಲೇ ಮೂವರ ಸಾವು
 
ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಸಮೀಪ ಸುಡುಮದ್ದು ತಯಾರಿಕಾ ಘಟಕದಲ್ಲಿ ರವಿವಾರ ಸಂಜೆ 5 ಗಂಟೆಗೆ ಸ್ಫೋಟ ಸಂಭವಿಸಿ ಮೂವರು ಸ್ಥಳದಲ್ಲೇ ಛಿದ್ರವಾಗಿದ್ದಾರೆ.

ಕುಚ್ಚೋಡಿ ಸಮೀಪದ ನಿವಾಸಿ ಬಶೀರ್ ಎಂಬವರ ಜಮೀನಿನಲ್ಲಿ ಪಟಾಕಿ ತಯಾರಿಸುತ್ತಿದ್ದರು. ಇಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು.ಈ ಪೈಕಿ ಕೇರಳದ ಸ್ವಾಮಿ(55) ,ಕೇರಳದ ವರ್ಗಿಸ್ (68),ಹಾಸನದ ಅರಸೀಕೆರೆ ನಿವಾಸಿ ಚೇತನ್(25) ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಉಳಿದಂತೆ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಕೇರಳ ಇಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದರು.

ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಓರ್ವನ ಮೃತದೇಹ ದೊರೆತಿದ್ದು, ಇನ್ನಿಬ್ಬರ ದೇಹ ಸ್ಫೋಟದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರೂ,ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸ್ಥಳದಲ್ಲಿ ಶೆಡ್ ಸಂಪೂರ್ಣ ಧ್ವಂಸವಾಗಿದ್ದು ಇದರ ಸದ್ದು 4 ಕಿ.ಮೀ. ವ್ಯಾಪ್ತಿಯಷ್ಟು ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ,ಡಿವೈಎಸ್ ಪಿ ವಿಜಯ ಪ್ರಸಾದ್ ಸಹಿತ ವೇಣೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಸ್ಥಳಕ್ಕೆ ಎಸ್.ಪಿ. ರಿಷ್ಯಂತ್ ಭೇಟಿ ನೀಡಲಿದ್ದಾರೆ


Spread the love