ಬೇಡಗುಡ್ಡೆಯಿಂದ ಪಂಬತ್ತಾಜೆ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆಗ್ರಹ
ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರೋಪಾಡಿ ಇದರ ಸೇರಾಜೆ ಬೇಡಗುಡ್ಡೆಯಿಂದ ಪಂಬತ್ತಾಜೆ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸುವಂತೆ ಶಾಲೆಯವರು ಮನವಿ ಮಾಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ವಾರ್ಡ ಸಂಖ್ಯೆ-3, ಇದರ ಸೇರಾಜೆ ಬೇಡಗುಡ್ಡೆಯಿಂದ ಪಂಬತ್ತಾಜೆ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಅಜಮಾಸು 800 ಮೀಟರ್ ಅಂತರದ ರಸ್ತೆಯು ಕೆಸರು ಮಣ್ಣಿನ ಕಂದಕದಿಂದ ಕೂಡಿದ್ದು, ಮಳೆಗಾಲ ಬಂತೆಂದರೆ ಈ ಮಾರ್ಗದಲ್ಲಿ ಸಂಚಾರ ಮಾಡುವದು ತುಂಬಾ ತ್ರಾಸದಾಯಕವಾಗಿ ಪರಿಣಮಿಸಿದೆ. ಸುಮಾರು 600 ಜನಸಂಖ್ಯೆ ಹೊಂದಿರುವ ಪಂಬತ್ತಾಜೆ ಗ್ರಾಮಸ್ಥರು ಈ ಮಾರ್ಗದ ಮೂಲಕವೇ ಸಂಚರಿಸಬೇಕಿದೆ.
ಪ್ರಸ್ತುತ ಕರೊನಾದ ವಿಷಮ ಸ್ಥಿತಿಯಲ್ಲಿ ಏನಾದರೂ ಆಕಸ್ಮಿಕ ಅವಘಡಗಳಾದರೆ ತುರ್ತಾಗಿ ಅಂಬ್ಯುಲೆನ್ಸ್ ಕೂಡ ಈ ಮಾರ್ಗದಲ್ಲಿ ಪ್ರವೇಶಿಸಲಾರದ ದುಸ್ಥಿತಿಯಿದ್ದು ನಾಗರಿಕರು ಪರದಾಡಬೇಕಾದ ಸ್ಥಿತಿ ತಲೆದೋರಿದೆ. ಈ ವರ್ಷ ಈ ಪ್ರದೇಶದಲ್ಲಿ ತುಂಬಾ ಮಳೆ ಸುರಿದಿರುವದರಿಂದ ಪಾದಚಾರಿಗಳು ನಡೆದುಕೊಂಡು ಹೋಗುವಾಗಲೂ ಈ ಮಾರ್ಗದಲ್ಲಿ ಕಾಲುಜಾರಿ ಬೀಳುತ್ತಿರುವದು ಸರ್ವೇಸಾಮಾನ್ಯವಾಗಿದೆ. ಬೈಕಲ್ಲಿ ಸಂಚರಿಸುವವರ ಪಾಡಂತೂ ಹೇಳತೀರದು. 2014 ರಿಂದ ಇಂದಿನವರೆಗೂ ಇಲ್ಲಿಯ ನಿವಾಸಿಗಳು ಮತ್ತು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯವರು ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸುವಂತೆ ಮನವಿ ಮಾಡುತ್ತಲೇ ಬಂದಿದ್ದಾರೆ.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಸ್ಥಳೀಯರು ಬಂಟ್ವಾಳದ ತಾಲೂಕು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯವರಲ್ಲಿ ಈ ಹಿಂದೆ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಪಂಬತ್ತಾಜೆ ಗ್ರಾಮನಿವಾಸಿಗಳ ಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆನ್ನುವದು ಗ್ರಾಮಸ್ಥರ ಅಳಲಾಗಿದೆ.
ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಈ ಗ್ರಾಮಸ್ಥರ ನೆರವಿಗೆ ಬಂದವರು ಉಡುಪಿಯ ಕರೊನಾ ವಾರಿಯರ್ಸ್ನ ಸಂಚಾಲಕರಾದ ದೀಪಕ ಶೆಣೈ ಮತ್ತು ಶ್ರೀ ಲಕ್ಮೀಜನಾರ್ದನ ದೇವಸ್ಥಾನ ನಿರ್ಮಾಣ ಮತ್ತು ವಿಶ್ವಸ್ಥ ಮಂಡಳಿಯ ಉಸ್ತುವಾರಿ ಗೋಪಾಲಕೃಷ್ಣ ಪ್ರಭು ಇನ್ನಿತರÀರು. ಕರೊನಾ ವಾರಿಯರ್ಸ್ಗಳ ಸ್ಪಂದನೆಯಿಂದಾಗಿ ಫುಡ್ ಕಿಟ್ ಈ ಗ್ರಾಮದ 35 ಕ್ಕೂ ಹೆಚ್ಚು ಕುಟುಂಬಕ್ಕೆ ದೊರೆಯಿತೆಂದು ರಾಮಚಂದ್ರ ಶೆಣೈ, ಜಮಾಲುದ್ದೀನ್, ಕೃಷ್ಣ ಸೇರಾಜೆ, ಯಮುನಾ ಸೇರಾಜೆ, ವಿದ್ಯಾ ಸತ್ಯಗಣಪತಿ ಭಟ್, ವಿಘ್ನರಾಜ ಭಟ್, ಕೋಡಿಮೂಲೆ ಗಣೇಶ ಭಟ್ ಮುಂತಾದವರು ಸ್ಮರಿಸಿಕೊಳ್ಳುತ್ತಾರೆ.
ಸರ್ಕಾರ ಮತ್ತು ಜಿಲ್ಲಾಡಳಿತ ಮನಸ್ಸು ಮಾಡಿದರೆ ಈ ಹಿಂದುಳಿದ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವದು ಕಷ್ಟದ ಕೆಲಸವೇನಲ್ಲ. ಜನಪ್ರತಿನಿಧಿಗಳು ಇನ್ನಾದರೂ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಪಂಬತ್ತಾಜೆ ಗ್ರಾಮಸ್ಥರ ಬಹುದಿನದ ಕಾಂಕ್ರೀಟ್ ರಸ್ತೆಯ ಬೇಡಿಕೆಯನ್ನು ನೆರವೇರಿಸಲಿ.
ಸಚಿತ್ರ ವರದಿ : ಅರವಿಂದ ಶ್ಯಾನಭಾಗ, ಬಾಳೇರಿ