Home Mangalorean News Kannada News ಬೇಸಿಗೆ ಕಾಲ: ಹಾಸ್ಟೆಲ್, ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ

ಬೇಸಿಗೆ ಕಾಲ: ಹಾಸ್ಟೆಲ್, ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ

Spread the love

ಬೇಸಿಗೆ ಕಾಲ: ಹಾಸ್ಟೆಲ್, ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ

ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಪದವಿ ಕಾಲೇಜು, ತಾಂತ್ರಿಕ ಇಂಜಿನಿಯರಿಂಗ್ ಕಾಲೇಜು, ಸಮಾಜ ಕಲ್ಯಾಣ ಇಲಾಖೆಗಳ ಮುಖ್ಯಸ್ಥರುಗಳ ಸಭೆಯನ್ನು ಮಂಗಳವಾರ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

ಬೇಸಿಗೆ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ತೆಗೆದುಕೊಳ್ಳಬೇಕಾಗುವ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಹಾಜರಾಗಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡು ಹೆಪಟೈಟಿಸ್ ಎ ಮತ್ತು ಬಿ ಕಾಯಿಲೆಗಳು, ಅತಿಸಾರ ಭೇದಿ, ವಿಷಮಶೀತ ಜ್ವರ (ಟೈಫಾಯ್ಡ್) ಮತ್ತು ಕಾಲರಾಗಳ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.

ಸುರಕ್ಷಿತ ಕುಡಿಯುವ ನೀರು ಮೂಲ ಪರೀಕ್ಷೆಗೊಳಪಡಿಸುವಿಕೆ, ಕ್ಲೋರಿನೇಷನ್ ಮಾಡುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಪ್ರತಿಯೊಂದು ವಸತಿ ನಿಲಯಗಳಲ್ಲಿ ಆಹಾರ ತಯಾರಿಕೆಯಲ್ಲಿ ಹೆಚ್ಚಿನ ಆರೋಗ್ಯ ಕಾಳಜಿ ವಹಿಸುವುದು, ಆಹಾರ ಪದಾರ್ಥಗಳ ಸುರಕ್ಷಿತ ಸಂಗ್ರಹಣೆ, ಘನತ್ಯಾಜ್ಯ, ದ್ರವತ್ಯಾಜಗಳ ಸಮರ್ಪಕ ವಿಲೇವಾರಿ ಮಾಡುವುದು, ಕಾಲಕಾಲಕ್ಕೆ ಅಡುಗೆ ಸಿಬ್ಬಂದಿಯವರ ಆರೋಗ್ಯ ತಪಾಸಣೆ ಮಾಡಿಸುವ ಬಗ್ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಮಾಹಿತಿ ನೀಡಿದರು.

ಪ್ರತಿಯೊಂದು ಹಾಸ್ಟೆಲ್‍ಗಳಲ್ಲೂ ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು, ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದ್ದು, ಯಾವುದೇ ರೀತಿಯ ತೊಂದರೆಗಳಿಗೆ ಆಸ್ಪದ ನೀಡದೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ ತಕ್ಷಣಕ್ಕೆ ಪ್ರಥಮ ಚಿಕಿತ್ಸೆಯೊಂದಿಗೆ ಪ್ರಕರಣಗಳ ವರದಿಯನ್ನು ಇಲಾಖೆಗೆ ತಿಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ ತಿಳಿಸಿದರು.

ವಿದ್ಯಾರ್ಥಿಗಳು ಬೀದಿಬದಿಯಲ್ಲಿರುವ ಆಹಾರ ಪದಾರ್ಥಗಳನ್ನು ಸೇವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸುವುದು ಹಾಗೂ ಬೀದಿ ಬದಿಯಲ್ಲಿ ಮಾರುವ ಆಹಾರ ಪದಾರ್ಥಗಳ ಯಾವುದೇ ದೂರುಗಳು ಇದ್ದಲ್ಲಿ ಕೂಡಲೆ ಪ್ರಾಧಿಕಾರಿದ ಆಹಾರ ಸುರಕ್ಷತೆ ವಿಭಾಗಕ್ಕೆ ದೂರನ್ನು ನೀಡಲು ಅವರು ಸೂಚಿಸಿದರು.

ಸಭೆಯಲ್ಲಿ ಸರಕಾರಿ ಲೇಡಿಗೋಷನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಡಾ. ದುರ್ಗಾಪ್ರಸಾದ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾತರಿ ಪ್ರಾಧಿಕಾರ ಅಂಕಿತಾಧಿಕಾರಿ ಡಾ. ಪ್ರವೀಣ್ ,ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಮತ್ತಿತರು ಹಾಜರಿದ್ದರು.


Spread the love

Exit mobile version