ಬೈಂದೂರು: ಕೊಡೇರಿ ಸಮುದ್ರದಲ್ಲಿ ನಾಡದೋಣಿ ದುರಂತ – ನಾಲ್ವರು ಮೀನುಗಾರರು ನಾಪತ್ತೆ
ಬೈಂದೂರು: ಮಳೆಯ ರುದ್ರನರ್ತನಕ್ಕೆ ಕರಾವಳಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮೀನುಗಾರಿಕೆಗಾಗಿ ಕಡಲಿಗೆ ಹೇಳಿದ ನಾಲ್ವರು ದೋಣಿ ಮುಗುಚಿ ಬಿದ್ದು ಕಡಲಿನಲ್ಲಿ ಕಣ್ಮರೆಯಾದ ಘಟನೆ ಭಾನುವಾರ ನಡೆದಿದೆ.
ಭಾನುವಾರ ಮುಂಜಾನೆ ಸಾಗರ ಶ್ರೀ ಎಂಬ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ 12 ಜನ ಕಡಲಿನ ಅಬ್ಬರಕ್ಕೆ ದೋಣಿಯಿಂದ ಮುಗುಚಿ ಬಿದ್ದಿದ್ದಾರೆ. ಈ ಪೈಕಿ ಎಂಟು ಜನರು ಸಾವಿನ ಜೊತೆ ಕಾದಾಡಿ ಈಜಿ ದಡ ಸೇರಿದ್ದಾರೆ. ಆದರೆ ನಾಲ್ವರು ಮೀನುಗಾರರು ಕಡಲಿನಲ್ಲಿ ಕಳೆದು ಹೋದವರು ಇನ್ನೂ ಪತ್ತೆಯಾಗಿಲ್ಲ.
ದುರಂತಕ್ಕೀಡಾದ ಸಾಗರ ಶ್ರೀ ಎಂಬ ದೋಣಿಯಲ್ಲಿದ್ದ ಲಕ್ಷ್ಮಣ ಕಾರ್ವಿ ನಾಗ ಖಾರ್ವಿ ಮಂಜುನಾಥ ಖಾರ್ವಿ ಶೇಖರ ಖಾರ್ವಿ ಎಂಬ ನಾಲ್ವರು ಇನ್ನೂ ಕಣ್ಮರೆಯಾಗಿದ್ದು ಇವರಿಗಾಗಿ ತೀವ್ರ ಹುಡುಕಾಟ ನಡೆದಿದೆ.
ಮೀನುಗಾರಿಕೆಯನ್ನು ಮುಗಿಸಿ ಕಡಲಿನಿಂದ ಇನ್ನೇನೋ ಮೇಲೆ ಬರಬೇಕು ಅನ್ನುವಷ್ಟರಲ್ಲೇ 20 ಅಡಿ ಎತ್ತರದ ಭಾರಿ ಅಲೆಯೊಂದು ದೋಣಿಗೆ ಬಡಿದಿದೆ. ಇದರಿಂದ ನಿಯಂತ್ರಣ ತಪ್ಪಿದ ದೋಣಿ ಅಲ್ಲೇ ಇದ್ದ ಬಂಡೆ ಕಲ್ಲಿಗೆ ಬಡಿದು ಮಗುಚಿಬಿದ್ದಿದೆ.
ಸ್ಥಳೀಯ ಮೀನುಗಾರರ ಜೊತೆಗೆ ಕರಾವಳಿ ಕಾವಲು ಪಡೆ ಮತ್ತಿತರ ರಕ್ಷಣಾ ಕಾರ್ಯಕರ್ತರು ಕಡಲಿ ಗಿಳಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಕಡಲಿನ ಪ್ರಕ್ಷುಬ್ಧ ವಾತಾವರಣ ಮತ್ತು ವಿಪರೀತ ಮಳೆ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದೆ
ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯ ಮೀನುಗಾರರಿಗೆ ಧೈರ್ಯ ತುಂಬಿದ್ದಾರೆ.