Home Mangalorean News Kannada News ಬೈಕಂಪಾಡಿಗೆ ಸ್ಥಳಾಂತರಗೊಂಡ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲೇ ಪುನರಾರಂಭಿಸಲು ಒತ್ತಾಯ 

ಬೈಕಂಪಾಡಿಗೆ ಸ್ಥಳಾಂತರಗೊಂಡ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲೇ ಪುನರಾರಂಭಿಸಲು ಒತ್ತಾಯ 

Spread the love

ಬೈಕಂಪಾಡಿಗೆ ಸ್ಥಳಾಂತರಗೊಂಡ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲೇ ಪುನರಾರಂಭಿಸಲು ಒತ್ತಾಯ 

ಮಂಗಳೂರು: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ದ.ಕ.ಜಿಲ್ಲೆಯ ಆರ್ಥಿಕತೆಯ ಜೀವನಾಡಿ ನಗರದ ಹ್ರದಯ ಭಾಗದಲ್ಲಿರುವ ಕೇಂದ್ರ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬೈಕಂಪಾಡಿಯ APMC ಯಾರ್ಡ್ ಗೆ ಸ್ಥಳಾಂತರಿಸಿದ್ದು,ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು,ಕೂಡಲೇ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲಿ ಹಿಂದೆ ಇದ್ದ ಕಟ್ಟಡದಲ್ಲೇ ಪುನರಾರಂಭಿಸಬೇಕೆಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ(ರಿ)ವು ದ.ಕ.ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಬಗ್ಗೆ ಸಂಘದ ಉನ್ನತ ಮಟ್ಟದ ನಿಯೋಗವೊಂದು ದ.ಕ.ಜಿಲ್ಲಾಧಿಕಾರಿಗಳನ್ನು ಹಾಗೂ ಮನಪಾ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು.

ಕೊರೋನಾ ವೈರಸ್ ನ ಗಂಭೀರತೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿಗಳು ತಾ.2-04-2020ರಿಂದ 14-04-2020ರವರೆಗೆ ಕೇಂದ್ರ ಮಾರುಕಟ್ಟೆಯನ್ನು ಸಂಪುರ್ಣವಾಗಿ ಸ್ಥಗಿತಗೊಳಿಸಿ, ಇಡೀ ಕೇಂದ್ರ ಮಾರುಕಟ್ಟೆಯನ್ನು ತಾತ್ಕಾಲಿಕ ನೆಲೆಯಲ್ಲಿ ಬೈಕಂಪಾಡಿಯ APMC ಯಾರ್ಡ್ ಗೆ ಸ್ಥಳಾಂತರಿಸಬೇಕೆಂದು ಆದೇಶ ನೀಡಿದ್ದರು. ಆದರೆ ಅಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಕೊಡದೆ,ಧೂಳಿನಿಂದ ತುಂಬಿದ ಆ ಜಾಗದಲ್ಲಿ ಜನಸಾಮಾನ್ಯರು ತಿನ್ನುವ ಆಹಾರ ಪದಾರ್ಥಗಳಾದ ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಅಹವಾಲನ್ನು ಸ್ವೀಕರಿಸಲು ತಯಾರಿಲ್ಲ ಎಂದು ಸಂಘವು ಆಕ್ರೋಶ ವ್ಯಕ್ತಪಡಿಸಿದೆ.

ಜಿಲ್ಲಾಧಿಕಾರಿಗಳು ನೀಡಿದ ಮಾರುಕಟ್ಟೆ ಸ್ಥಳಾಂತರದ ಆದೇಶದ ಅವಧಿ ಈಗಾಗಲೇ ಮುಗಿದಿದ್ದು,ಕೂಡಲೇ ನಗರದ ಹ್ರದಯ ಭಾಗದಲ್ಲಿರುವ ಹಿಂದಿನ ಕಟ್ಟಡದಲ್ಲಿ ಪುನರಾರಂಭಿಸಬೇಕೆಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ(ರಿ)ವು ದ.ಕ.ಜಿಲ್ಲಾಡಳಿತವನ್ನು ಹಾಗೂ ಮಂಗಳೂರು ಮಹಾನಗರ ಪಾಲಿಕೆಯನ್ನು ಆಗ್ರಹಿಸುತ್ತದೆ.

ನಿಯೋಗದಲ್ಲಿ CITU ದಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮುಸ್ತಾಪ ಕುಂಞ,ಪ್ರಧಾನ ಕಾರ್ಯದರ್ಶಿ ಜನಾರ್ಧನ ಸಾಲಿಯಾನ್, ಸಂಘದ ಇತರ ಪದಾಧಿಕಾರಿಗಳಾದ ಅನಿಲ್ ಕುಮಾರ್, ಬಿ.ಎಚ್.ಹಮೀದ್, ತೌಸಿಫ್, ಹನೀಫ್ ರವರು ಉಪಸ್ಥಿತರಿದ್ದರು.


Spread the love

Exit mobile version