Home Mangalorean News Kannada News ಬೈಕಂಪಾಡಿ-ಕೂಳೂರು ಫ್ಲೈಓವರ್: ತ್ವರಿತಗೊಳಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ 

ಬೈಕಂಪಾಡಿ-ಕೂಳೂರು ಫ್ಲೈಓವರ್: ತ್ವರಿತಗೊಳಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ 

Spread the love

ಬೈಕಂಪಾಡಿ-ಕೂಳೂರು ಫ್ಲೈಓವರ್: ತ್ವರಿತಗೊಳಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ 

ಮಂಗಳೂರು:  ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಂಪಾಡಿಯಿಂದ ಕೂಳೂರುವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೂಚಿಸಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಗಾರಿಕಾ ಸ್ಪಂದನ ಹಾಗೂ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕೈಗಾರಿಕಾ ಅಸೋಸಿಯೇಶನ್‍ಗಳ ಪದಾಧಿಕಾರಿಗಳು, ಹೆದ್ದಾರಿಯಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶ ತಿರುವಿನಲ್ಲಿ ಹಾಗೂ ಕೂಳೂರು ವರೆಗಿನ ರಸ್ತೆಯಲ್ಲಿ ಹಲವು ವರ್ಷಗಳಿಂದ ನಿರಂತರ ಸಂಚಾರ ಸಮಸ್ಯೆಗಳು ಪರಿಹಾರವಾಗದಿರುವ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಪ್ರಸ್ತಾವಿಸಿದರು. ಇದರಿಂದ ಸಾರ್ವಜನಿಕರ ಸುಗಮ ಸಂಚಾರ ಸೇರಿದಂತೆ ಇಲ್ಲಿನ ಉದ್ಯಮ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೈಕಂಪಾಡಿಯಿಂದ ಕೂಳೂರು ವರೆಗೆ ಪ್ರತ್ಯೇಕ ಮೇಲ್ಸೇತುವ ನಿರ್ಮಾಣದ ಯೋಜನೆ ರೂಪಿಸಿದೆ. ಈ ಯೋಜನೆಗೆ ಶೀಘ್ರದಲ್ಲೇ ಅನುಮೋದನೆ ಪಡೆದು, ಕಾಮಗಾರಿ ಪ್ರಕ್ರಿಯೆ ಆರಂಭಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಘನ ವಾಹನಗಳು ಸಂಚರಿಸುವ ಇಲ್ಲಿನ ಹೆದ್ದಾರಿ ಸಂಚಾರ ಸಮಸ್ಯೆಯ ಬಗ್ಗೆ ತನಗೆ ಅರಿವಿದೆ. ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೈಗಾರಿಕಾ ಸ್ಪಂದನದಲ್ಲಿ ಉದ್ಯಮಿಗಳ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು, ತಣ್ಣೀರುಬಾವಿಯಲ್ಲಿ ಕೈಗಾರಿಕಾ ಪ್ರದೇಶಕ್ಕೆ ಸೇರಿದ ಭೂಮಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ (ಯುಜಿಡಿ) ಹಾಗೂ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ನೀರಿನ ಪೈಪ್‍ಲೈನ್ ಕಾಮಗಾರಿಯನ್ನು ಮಹಾನಗರಪಾಲಿಕೆ ವತಿಯಿಂದ ನಡೆಸಲು ಮನಪಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಲು ಜಮೀನಿನ ಕೊರತೆ ಇರುವ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಜಮೀನು ಗುರುತಿಸಲು ಕೆಐಎಡಿಬಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಸಭೆಯಲ್ಲಿ ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್, ಕೆಐಎಡಿಬಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ವಿವಿಧ ಕೈಗಾರಿಕಾ ಅಸೋಸಿಯೇಶನ್‍ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love

Exit mobile version