ಬೈಕುಗಳಿಗೆ ಉಚಿತ ಪೆಟ್ರೋಲ್; ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರ ವಿರುದ್ದ ಪ್ರಕರಣ ದಾಖಲು
ಉಡುಪಿ: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯನ್ನು ಉಲ್ಲಂಘಿಸಿ ಕಾರ್ಯಕರ್ತರ ಬೈಕ್-ಸ್ಕೂಟರ್ ಗಳಿಗೆ ಉಚಿತವಾಗಿ ಪೆಟ್ರೋಲ್ ತುಂಬಿದ ಬಗ್ಗೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಮತ್ತು ಪೆಟ್ರೋಲ್ ಬಂಕ್ ಮಾಲಕರ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಮೊದಲ ಪ್ರಕರಣದಲ್ಲಿ ಏ15ರಂದು ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಸಂದರ್ಭದ್ಲಲಿ ಬೈಕ್ ಜಾಥಾ ನಡೆಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಅವರಿಗೆ ಅನುಮತಿ ನೀಡಲಾಗಿತ್ತು. ಆದರೆ ಅವರು ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯಕರ್ತರ ಬೈಕು ಮತ್ತು ಸ್ಕೂಟರುಗಳಿಗೆ ಸಂತೆಕಟ್ಟೆಯ ಇಂದಿರಾ ಪೆಟ್ರೋಲ್ ಬಂಕ್, ಗುಂಡಿಬೈಲಿನ ಲಕ್ಷ್ ಎಂಟರ್ ಪ್ರೈಸಸ್, ಭಾಗೀರಥಿ ಎಂಟರ್ ಪ್ರೈಸಸ್, ಇಂದ್ರಾಳಿಯ ರಾಜರಾಜೇಶ್ವರಿ ಎಂಟರ್ ಪ್ರೈಸಸ್ ಪೆಟ್ರೋಲ್ ಬಂಕುಗಳಲ್ಲಿ ಉಚಿತವಾಗಿ ಪೆಟ್ರೋಲ್ ತುಂಬಿಸಿದ್ದನ್ನು ಚುನಾವಣಾ ಆಯೋಗ ಗುರುತಿಸಿದೆ. ಈ ಬಗ್ಗೆ ಚುನಾವಣಾ ಕರ್ತವ್ಯಧಿಕಾರಿ ಶ್ರೀರಾಮ ಹೆಗ್ಡೆ ಅವರು ಜಿಲ್ಲಾ ನ್ಯಾಯಾಲಯದ ಪರವಾನಿಗೆ ಪಡೆದು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮೇ 1 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರ ಸಭಾ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಅವರಿಗೆ ಅನುಮತಿ ನೀಡಲಾಗಿತ್ತು. ಆದರೆ ಸಭೆ ಮುಗಿದ ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರ ಬೈಕುಗಳಿಗೆ ನಗರದ ಗುಂಡಿಬೈಲಿನ ಲಕ್ಷ ಎಂಟರ್ ಪ್ರೈಸಸ್-ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕಿನಲ್ಲಿ ಉಚಿತವಾಗಿ ಪೆಟ್ರೋಲ್ ತುಂಬಿಸಿ ಮತದಾರರಿಗೆ ಆಮಿಷ ನೀಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗವು ವೀಡಿಯೋ ಚಿತ್ರೀಕರಣ ನಡೆಸಿ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಅನುಮತಿಯಂತೆ ಚುನಾವಣಾ ಕರ್ತವ್ಯಾಧಿಕಾರಿ ದಯಾನಂದ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.