ಬೋಟಿನೊಂದಿಗೆ ನಾಪತ್ತೆಯಾದ ಮೀನುಗಾರರ ಪತ್ತೆಗೆ ಸರ್ವ ಪ್ರಯತ್ನ ಪ್ರಗತಿಯಲ್ಲಿದೆ – ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ಮೀನುಗಾರಿಕಿಗೆ ಡಿಸೆಂಬರ್ 13ರಂದು ತೆರಳಿ 15ರ ರಾತ್ರಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನ ಹಾಗೂ ಅದರಲ್ಲಿದ್ದ ಮೀನುಗಾರರ ಪತ್ತೆಗೆ ಎಲ್ಲಾ ರೀತಿಯಲ್ಲಿ ನಿರಂತರವಾಗಿ ಪ್ರಯತ್ನ ಮುಂದುವರೆದಿದೆ ಎಂದು ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಡಿಸೆಂಬರ್ 15ರಂದು ರಾತ್ರಿ ಒಂದರ ಸುಮಾರಿಗೆ ಸುವರ್ಣ ತ್ರಿಭುಜ ಬೋಟಿನಿಂದ ಲಭಿಸಿದ ಕೊನೆಯ ವಯರ್ ಲೆಸ್ ಸಂದೇಶ ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ಇದ್ದುದರಿಂದ ಮಹಾರಾಷ್ಟ್ರ ಸರಕಾರದ ಮೇಲೆ ಬೋಟ್ ಹಾಗೂ ಮೀನುಗಾರರ ತ್ವರಿತ ಪತ್ತೆಗೆ ಒತ್ತಡ ಹೇರಲಾಗಿದೆ. ತಾನು ಮಂಗಳವಾರ ಮಹಾರಾಷ್ಟ್ರದ ಸಚಿವ ರಂಜಿತ್ ಪಾಟೀಲ್ ಹಾಗೂ ಆ ರಾಜ್ಯದ ಪೊಲೀಸ್ ಮಹಾನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅಲ್ಲದೆ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಈ ಕುರಿತು ಈಗಾಗಲೇ ಮಹಾರಾಷ್ಟ್ರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಸಂಸದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ತಾನು ಹೊಸದಿಲ್ಲಿಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರ ಆಪ್ತ ಕಾರ್ಯದರ್ಶಿಯವರನ್ನ ಭೇಟಿ ಮಾಡಿ ನಾಫತ್ತೆಯಾದ ಮೀನುಗಾರರ ಪತ್ತೆ ಕಾರ್ಯವನ್ನು ತ್ವರಿತಗೊಳಿಸುವಂತೆ ಕೋರಿದ್ದೇನೆ. ಬುಧವಾರ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮರನ್ನು ಭೇಟಿಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.