ಬೋರಸೆ ವರ್ಗಾವಣೆ; ಸುಧೀರ್ ಕುಮಾರ್ ರೆಡ್ಡಿ ದಕ ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಕ
ಮಂಗಳೂರು: ಕಲ್ಲಡ್ಕದಲ್ಲಿ ನಡೆಯುತ್ತಿರುವ ಕೋಮು ಘರ್ಷಣೆಗಳು ನಡೆಯುತ್ತಿರುವ ನಡುವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಬೋರಸೆ ನಡುವೆ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಕೇಸು ಜಡಿದು ಬಂಧಿಸುವ ಕುರಿತು ವೈರಲ್ ಆದ ವೀಡಿಯೊ ಪ್ರಕರಣದ ಪ್ರತಿಭಟನೆಯ ನಡುವೆಯೇ ರಾಜ್ಯಸರಕಾರ ದಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೋರಸೆ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜಿಲ್ಲೆಯ ನೂತನ ಎಸ್ಪಿಯಾಗಿ ಮಂಡ್ಯ ಜಿಲ್ಲಾ ಎಸ್ಪಿಯಾಗಿರುವ ಸುಧೀರ್ ಕುಮಾರ್ ರೆಡ್ಡಿಯವರನ್ನು ಸರಕಾರ ನೇಮಿಸಿದೆ. ನಿರ್ಗಮನ ಎಸ್ಪಿ ಭೂಷಣ್ ಗುಲಾಬ್ ರಾವ್ ಬೋರಸೆ ಅವರು ಬೆಂಗಳೂರು ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ಮತ್ತು ರಮಾನಾಥ ರೈ ಅವರ ನಡುವಿನ ಪ್ರಕರಣ ಪ್ರತಿಭಟನೆಯ ಹಂತ ಪಡೆದಾಗಲೇ ದಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೋರಸೆ ವರ್ಗಾವಣೆ ಆಗಲಿದ್ದಾರೆ ಮತ್ತು ಚಿಕ್ಕಮಗಳೂರಿನ ಎಸ್ಪಿ ಕೆ. ಅಣ್ಣಾಮಲೈ ಅವರು ನೂತನ ಎಸ್ಪಿಯಾಗಿ ನೇಮಕಗೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣ ಹಾಗೂ ಕೆಲವೊಂದು ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾಗಿತ್ತು. ಅಣ್ಣಾಮಲೈ ಎಸ್ಪಿಯಾಗಿ ಬಂದರೆ ಜಿಲ್ಲೆಯ ಪರಿಸ್ಥಿತಿ ಸುಧಾರಿಸಲಿದೆ ಎಂಬ ಕಾರಣಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು. ಆದರೆ ಈ ಸುದ್ದಿಯ ಬಗ್ಗೆ ಮ್ಯಾಂಗಲೋರಿಯನ್ ಡಾಟ್ ಕಾಮ್ ಜೊತೆ ಮಾತನಾಡಿದ ಅಣ್ಣಾಮಲೈ ಅವರು ಸಂಪೂರ್ಣ ಗಾಳಿ ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು. ಅದರಂತೆ ಕೊನೆಗೂ ದಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೋರಸೆ ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದಾರೆ. ನೂತನ ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯ ನೇತೃತ್ವದಲ್ಲಿ ಕಲ್ಲಡ್ಕ ಹಾಗೂ ಜಿಲ್ಲೆ ಶಾಂತಿಯಿಂದ ಮುಂದುವರೆಯಲಿ ಎಂಬುದೇ ಜಿಲ್ಲೆಯ ಜನತೆಯ ಹಾರೈಕೆ.
ಬಂಟ್ವಾಳ ಗಲಭೆ ನಿಯಂತ್ರಣಕ್ಕೆ ಅಣ್ಣಾಮಲೈ ಸಹಕಾರ ಪಡೆಯಲಿರುವ ಪೋಲಿಸರು
ಕಲ್ಲಡ್ಕ ಘಟನೆ ದಿನದಿಂದ ದಿನಕ್ಕೆ ವಿಪರೀತಕ್ಕೆ ಹೋಗುತ್ತಿರುವ ಕಾರಣ ಪರಸ್ಥಿತಿ ನಿಯಂತ್ರಣದ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ದಕ ಜಿಲ್ಲಾ ಪೋಲಿಸರಿಗೆ ಸಹಾಯ ಮಾಡುವ ಸಲುವಾಗಿ ನೇಮಿಸಲಾಗಿದೆ.
ಅಣ್ಣಾಮಲೈ ಅವರು ತನ್ನ 100 ಮಂದಿ ಇತರ ಪೋಲಿಸ್ ಅಧಿಕಾರಿಗಳೊಂದಿಗೆ ಬಂಟ್ವಾಳ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡಲಿದ್ದಾರೆ.