ಬ್ಯಾಂಕರ್, ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕೆ.ಎಮ್. ಉಡುಪ ನಿಧನ
ಉಡುಪಿ: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ, ಸ್ವ ಉದ್ಯೋಗ, ಕೃಷಿ, ಹೈನುಗಾರಿಕೆಗಳಿಗೆ ಪ್ರೋತ್ಸಾಹ, ಸ್ವ ಉದ್ಯೋಗಕ್ಕೆ ಬೇಕಾದ ತರಬೇತಿ, ಸೌರ ವಿದ್ಯುತ್ ಬಳಕೆಗೆ ಪ್ರೇರಣೆ ಹೀಗೆ ವಿವಿಧ ಆಯಾಮಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಹರಿಕಾರ ಎಂದೇ ಪ್ರಸಿದ್ಧರಾದ ಕಾರ್ಕಡ ಮಂಜುನಾಥ ಉಡುಪ (80) ಅಸೌಖ್ಯದಿಂದ ಜು. 27ರಂದು ನಿಧನಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
ಬಿಎಸ್ಸಿ (ಕೃಷಿ) ಪದವೀಧರರಾದ ಉಡುಪರು ಅನಂತರ ಕಟಕ್‌ನ ಕೇಂದ್ರೀಯ ಸಂಸ್ಥೆಯಲ್ಲಿ ಭತ್ತದ ಕುರಿತು ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದು ಕೃಷಿ ಇಲಾಖೆಯಲ್ಲಿ ಭತ್ತದ ಬೆಳೆಯ ಸಂಶೋಧನಾಧಿಕಾರಿಯಾಗಿ 1959ರಿಂದ 65ರ ವರೆಗೆ ಕಾರ್ಯನಿರ್ವಹಿಸಿದರು. ಟಿ.ಎ. ಪೈಯವರ ಪ್ರೇರಣೆಯಿಂದ ಸಿಂಡಿಕೇಟ್ ಬ್ಯಾಂಕ್‌ಗೆ 1967ರಲ್ಲಿ ಸೇರ್ಪಡೆಯಾಗಿ 1989ರವರೆಗೆ ಬ್ಯಾಂಕಿನ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸಿಂಡಿಕೇಟ್ ಬ್ಯಾಂಕ್ ಮುಖಾಂತರ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸಾಲ ಯೋಜನೆಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ರಾಮೀಣ ಬ್ಯಾಂಕಿನ ಮುಖಾಂತರ ತನ್ನ ಸೇವಾವಧಿಯಲ್ಲಿ ಸೌರ ಉಪಕರಣಗಳಿಗೆ ಗ್ರಾಮೀಣ ಬ್ಯಾಂಕುಗಳಿಂದ ಸಾಲ ನೀಡುವ ಯೋಜನೆಯನ್ನು ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಅನುಷ್ಠಾನ ಗೊಳಿಸಿದರು.
ನಿವೃತ್ತಿಯ ಬಳಿಕ ಸೆಲ್ಕೋ ಸಂಸ್ಥೆಯ ನಿರ್ದೇಶಕರಾಗಿ ಡಾ| ಹರೀಶ್ ಹಂದೆ ಅವರ ಜತೆ ಗ್ರಾಮೀಣ ಪ್ರದೇಶದ ಜನರ ಮನೆಗಳಿಗೆ ಸೌರ ದೀಪ ಒದಗಿಸುವಲ್ಲಿ ಮಹತ್ತರ ಕೊಡುಗೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ, ರುಡ್‌ಸೆಟ್ ಆಡಳಿತ ಮಂಡಳಿಯ ಸದಸ್ಯರಾಗಿ, ಸಿಂಡಿಕೇಟ್ ಕೃಷಿ ಮತ್ತು ಗ್ರಾಮೀಣಾಭಿವೃಧಿœ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ ಹಾಗೂ ಸುಮಾರು ಎರಡು ದಶಕಗಳ ಕಾಲ ಕಾರ್ಯದರ್ಶಿಯಾಗಿ, ಟಿ.ಎ. ಪೈಯವರಿಂದ ಸ್ಥಾಪಿಸಲ್ಪಟ್ಟ ಭಾರತೀ¿å ವಿಕಾಸ ಟ್ರಸ್ಟಿನ ಟ್ರಸ್ಟಿಯಾಗಿ ಅನಂತರ 2003ರಿಂದ ಆಡಳಿತ ವಿಶ್ವಸ್ತರಾಗಿ ಈವರೆಗೂ ಸೇವೆ ಸಲ್ಲಿಸುತ್ತಿದ್ದರು.
ಕೆ.ಎಂ. ಉಡುಪರ ಅಂತ್ಯ ಸಂಸ್ಕಾರ ಅವರ ಸ್ವ ಗ್ರಾಮ ಮಂದರ್ತಿಯಲ್ಲಿ ಜು. 28ರ ಮಧ್ಯಾಹ್ನ 11:30 ಕ್ಕೆ ನಡೆಯಲಿದೆ.