ಬ್ಯಾಡ್ಮಿಂಟನ್ ಕ್ರೀಡಾಪಟು ಕಾವ್ಯ ಆತ್ಮಹತ್ಯೆ; ತನಿಖೆಗೆ ಪೋಲಿಸ್ ಕಮೀಷನರ್ ಆದೇಶ
ಮಂಗಳೂರು: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ಬ್ಯಾಂಡ್ಮಿಂಟನ್ ಕ್ರೀಡಾಪಟು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣದ ಕುರಿತು ವಿಶೇಷ ತನಿಖೆ ನಡೆಸುವಂತೆ ಮಂಗಳೂರು ನಗರ ಪೋಲಿಸ್ ಆಯುಕ್ತ ಟಿ.ಆರ್. ಸುರೇಶ್ ಆದೇಶ ನೀಡಿದ್ದಾರೆ.
ಕಾವ್ಯಾಳ ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಆಕೆಯ ಹೆತ್ತವರು ನೀಡಿದ ದೂರಿನ ಹಿನ್ನಲೆ ಹಾಗೂ ಸಾರ್ವಜನಿಕರ ಒತ್ತಡದಿಂದಾಗಿ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಲಾಗಿದೆ ಎನ್ನಲಾಗಿದೆ.
ಕಟೀಲು ಸಮೀಪದ ಎಕ್ಕಾರು ದೇವಗುಡ್ಡೆ ನಿವಾಸಿ ಲೋಕೇಶ್ ಅವರ ಪುತ್ರಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲಿನಲ್ಲಿ ವಾಸವಾಗಿದ್ದು ಅಲ್ಲಿಯೇ ಶಿಕ್ಷಣ ಪಡೆಯುತ್ತಿದ್ದರು. ಜುಲೈ 20 ರಂದು ರಾತ್ರಿ ಹಾಸ್ಟೆಲಿನಲ್ಲಿ ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಕ್ರೀಡಾ ಪ್ರತಿಭಾನ್ವಿತೆಯಾಗಿದ್ದ ಕಾವ್ಯಾಳ ಸಾವಿನ ಬಗ್ಗೆ ಆಕೆಯ ತಂದೆ ಲೋಕೆಶ್ ಶಂಕೆ ವ್ಯಕ್ತಪಡಿಸಿ ಇದೊಂದು ಕೊಲೆ ಎಂದು ಆಪಾದಿಸಿ ನಗರ ಪೋಲಿಸ್ ಆಯುಕ್ತರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಅವರ ದೂರಿನ ಆಧಾರದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.