Home Mangalorean News Kannada News ಬ್ರಹ್ಮಾವರದಲ್ಲಿ ಬೃಹತ್ ಜನಸಾಗರಕ್ಕೆ ಸಾಕ್ಷಿಯಾದ ಉಡುಪಿ ಜಿಲ್ಲಾ  ಬಿಲ್ಲವ ಮಹಾಸಮಾವೇಶ

ಬ್ರಹ್ಮಾವರದಲ್ಲಿ ಬೃಹತ್ ಜನಸಾಗರಕ್ಕೆ ಸಾಕ್ಷಿಯಾದ ಉಡುಪಿ ಜಿಲ್ಲಾ  ಬಿಲ್ಲವ ಮಹಾಸಮಾವೇಶ

Spread the love

ಬ್ರಹ್ಮಾವರದಲ್ಲಿ ಬೃಹತ್ ಜನಸಾಗರಕ್ಕೆ ಸಾಕ್ಷಿಯಾದ ಉಡುಪಿ ಜಿಲ್ಲಾ  ಬಿಲ್ಲವ ಮಹಾಸಮಾವೇಶ

ಉಡುಪಿ: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಇದರ ನೇತೃತ್ವದಲ್ಲಿ ಜಿಲ್ಲೆಯ ಸಮಸ್ತ ಬಿಲ್ಲವ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಬಿಲ್ಲವ ಮಹಾಸಮಾವೇಶ-2019 ಸಾವಿರಾರು ಮಂದಿ ಬಿಲ್ಲವ ಸಮುದಾಯದ ಜನಸ್ತೋಮದ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.

ಸಮಾವೇಶವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಡಾ| ಜಯಮಾಲಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವೆ ಜಯಮಾಲಾ ಅವರು ಸರ್ಕಾರ ಅನೇಕ ಯೋಜನೆಗಳನ್ನು ಹೊರತರುತ್ತಿದೆ. ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳುವುದು ಎಲ್ಲರ ಕರ್ತವ್ಯ ಮತ್ತು ಜಾಣತನ. ಬಿಲ್ಲವ ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಿಂದುಳಿದ ವರ್ಗ ಮೀಸಲಾತಿಯನ್ನು ಪ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಮಾರ್ಪಾಡು ಮಾಡುವ ಸಲುವಾಗಿ ಎಲ್ಲರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ ರಾಜಕೀಯದಲ್ಲಿ ಸತ್ಯಹರಿಶ್ಚಂದ್ರ ನಂತಹವರು ಇರಲು ಸಾಧ್ಯವಿಲ್ಲ. ಅಂತಹವರನ್ನು ಯಾರೂ ಕೂಡಾ ಇಷ್ಟಪಡುವುದಿಲ್ಲ. ಮೀಸಲಾತಿ ಎನ್ನುವುದು ಬಡತನ ನಿರ್ಮೂಲನ ಮಾಡುವ ಕಾರ್ಯಕ್ರಮವಲ್ಲ. ಈ ದೇಶ ನಮ್ಮದು. ಇಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ನಮ್ಮ ಹಕ್ಕು ನಮಗೂ ಸಮಪಾಲು ಸಿಗಬೇಕು ಎನ್ನುವುದಕ್ಕೆ ಮೀಸಲಾತಿ ಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಆಶೀರ್ವಚನ ನೀಡಿದ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂನ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನಾರಾಯಣಗುರುಗಳ ಚಿಂತನೆ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಕಳ ಬೊಲ್ಯುಟ್ಟು ಗುರುದೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಡುಪಿಯ ಕೆ.ರಘುಪತಿ ಭಟ್, ಕಾರ್ಕಳದ ಸುನೀಲ್ ಕುಮಾರ್, ಸೊರಬ ಕ್ಷೇತ್ರದ ಕುಮಾರ್ ಬಂಗಾರಪ್ಪ, ಬೈಂದೂರಿನ ಸುಕುಮಾರ್ ಶೆಟ್ಟಿ, ಕಾಪು ಕ್ಷೇತ್ರದ ಲಾಲಾಜಿ ಆರ್ ಮೆಂಡನ್, ಮೂಡುಬಿದಿರೆಯ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸನ್ಮಾನ : ಸಮಾರಂಭದಲ್ಲಿ ಬಿ.ಕೆ.ಹರಿಪ್ರಸಾದ್, ಡಾ.ಜಯಮಾಲಾ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೌರವಿಸಲಾಯಿತು.

ಮನವಿ : ಪ್ರಮುಖವಾಗಿ ಪ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಮೀಸಲಾತಿ ಮಾರ್ಪಾಡು ಮಾಡುವುದು, ಬ್ರಹ್ಮಶ್ರೀ ನಾರಾಯಣ ಗುರು ಯೋಜನೆ/ನಿಗಮವನ್ನು ಸ್ಥಾಪಿಸಿ ಬಿಲ್ಲವ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಾಗೂ ಕೃಷಿ ಇನ್ನಿತರ ಸ್ವ ಉದ್ಯೋಗ ಚಟುವಟಿಕೆಗಳ ಬಗ್ಗೆ ಬಡ್ಡಿ ರಹಿತ ಸಾಲ ಹಾಗೂ ವಸತಿ ಸೌಲಭ್ಯ ನೀಡಲು ಮತ್ತು ಬ್ರಹ್ಮ ಬೈದೇರುಗಳ ಗರೋಡಿಗಳ ಅರ್ಚಕರಿಗೆ ಮಾಸಾಶನ ಸೌಲಭ್ಯ ಹಾಗೂ ಗರೋಡಿಗಳ ಸ್ಥಳದ ಪಹಣಿ ಪತ್ರಗಳನ್ನು ಆಯಾ ಗರೋಡಿಗಳ ಹೆಸರಿಗೆ ಮಾರ್ಪಾಡು ಮಾಡಿಕೊಡುವಂತೆ ಮುಖ್ಯಮಂತ್ರಿ ಅವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಅವರ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರಿಗೆ ಮನವಿ ನೀಡಲಾಯಿತು.

ಬಿಲ್ಲವ ಮಹಾ ಸಮಾವೇಶದ ಅಧ್ಯಕ್ಷ ಬಿ.ಎನ್.ಶಂಕರ್ ಪೂಜಾರಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಅಚ್ಯುತ ಅಮೀನ್ ಕಲ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಶು ಕಲ್ಮಾಡಿ ವಂದಿಸಿದರು. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version