ಬ್ರಹ್ಮಾವರ : ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 49 ಕೆಜಿ ಗಾಂಜಾ ವಶ; ಇಬ್ಬರು ಸೆರೆ
ಉಡುಪಿ : ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 49 ಕೆಜಿ ಗಾಂಜಾವನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಮಿಳುನಾಡಿನ ತಿರುವನ್ ವೆಲ್ಲಿ ಜಿಲ್ಲೆಯ ಕರುತಪಾಂಡಿ (40) ಮತ್ತು ಪಶ್ಚಿಮ ಬಂಗಾಳದ ವಾನು ಹಲ್ ದಾರ್ (30) ಎಂದು ಗುರುತಿಸಲಾಗಿದೆ.
ಉತ್ತರಪ್ರದೇಶದಿಂದ ಕರಾವಳಿಗೆ ಬಿದಿರು ತುಂಬಿಸಿಕೊಂಡು ಬರುತ್ತಿದ್ದ ಲಾರಿಯನ್ನು ಬ್ರಹ್ಮಾವರ ತಾಲೂಕು ಹೇರೂರು ಬಳಿ ಪೊಲೀಸರು ತಡೆದು ತಪಾಸಣೆ ನಡೆಸಿ ಸುಮಾರು 49 ಕೆಜಿ 150 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಲಾರಿಯನ್ನು, ಎರಡು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಗಾಂಜಾದ ಅಂದಾಜು ಮೌಲ್ಯ ರೂ. 14,75,000, ಲಾರಿಯ ಅಂದಾಜು ಮೌಲ್ಯ ರೂ 30 ಲಕ್ಷ ಮತ್ತು ಮೊಬೈಲ್ ಹ್ಯಾಡ್ ಸೆಟ್ ಗಳ ಅಂದಾಜು ಮೌಲ್ಯ ರೂ 20000 ಆಗಿರುತ್ತದೆ
ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.