ಬ್ರಹ್ಮಾವರ: ಕಸ ವಿಲೇವಾರಿ ಕೇಂದ್ರದಲ್ಲಿ ಬೆಂಕಿ ಆಕಸ್ಮಿಕ ; ಲಕ್ಷಾಂತರ ರೂಪಾಯಿ ನಷ್ಟ
ಬ್ರಹ್ಮಾವರ: ಇಲ್ಲಿನ ಮಾರ್ಕೆಟ್ ಹತ್ತಿರದಲ್ಲಿರುವ ಎಸ್.ಎಲ್.ಆರ್.ಎಮ್ ಘಟಕದಲ್ಲಿ ಮಧ್ಯರಾತ್ರಿ ಹೊತ್ತಿಕೊಂಡ ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ.
ಸುಮಾರು 1ಗಂಟೆಯ ಹೊತ್ತಿಗೆ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಘಟಕದ ಒಳಗೆ ನಿಲ್ಲಿಸಿದ ಮೂರು ಎಎಸ್ ಗಾಡಿಗಳು, ಒಂದು ಪಿಕಪ್, ಲಕ್ಷಾಂತರ ಮೌಲ್ಯದ ಕಸ, ಎರಡು ಬಿಲ್ಲಿಂಗ್ ಬೇಲಿಂಗ್ ಮೆಶಿನ್, ಸಿಸಿ ಕೆಮರಾಗಳು, ಕಚೇರಿ, ಫೈಲ್ ಗಳು, ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಸಮೀಪದ ಗುಜರಿ ಅಂಗಡಿಗೂ ಬೆಂಕಿ ತಗುಲಿದ್ದು ಇಲ್ಲಿಯೂ ಒಂದಷ್ಟು ಹಾನಿಯಾಗಿದೆ. ಮಮತಾ ಇಲ್ಲೆಕ್ಟ್ರಿಕಲ್ಸ್ ಹೊರಗಡೆ ಇಟ್ಟ ಒಂದಷ್ಟು ಇಲೆಕ್ಟ್ರಿಲ್ಸ್ ವಸ್ತುಗಳು ಸುಟ್ಟುಹೋಗಿವೆ .
ಉಡುಪಿ, ಕುಂದಾಪುರ, ಮಲ್ಪೆ ಮೂರು ಕಡೆಗಳ ಅಗ್ನಿಶಾಮಕ ವಾಹನಗಳು, ಸಿಬ್ಬಂದಿಗಳು ಬೆಂಕಿನಂದಿಸಲು ಹರಸಾಹಸ ಪಟ್ಟರು. ಬೆಂಕಿ ಹೇಗೆ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲು ಡಿವಿಆರ್ ಪರಿಶೀಲಿಸಬೇಕಾಗಿದ್ದು ಬ್ರಹ್ಮಾವರ ಪೊಲೀಸರು ಪರಿಶೀಲನೆಗೆ ಕೊಂಡು ಹೋಗಿದ್ದಾರೆ. ಬೆಂಕಿ, ಹೊಗೆ ಭೀತಿ ಹುಟ್ಟಿಸುವ ರೀತಿಯಲ್ಲಿ ಆವರಿಸಿಕೊಂಡಿತ್ತು.
ಸ್ಥಳೀಯ ಪುಸ್ತಕ ಅಂಗಡಿಯ ಸಿಬ್ಬಂದಿ ಬೆಂಕಿ ತಗುಲಿದ್ದನ್ನು ಗಮನಿಸಿ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ಅಗ್ನಿಶಾಮಕ ಠಾಣೆಗಳಿಗೆ ಸಂಪರ್ಕಿಸಿದ್ದಾರೆ. ಮಾಹಿತಿ ಸಿಕ್ಕಿದ ತಕ್ಷಣ ಅಗ್ನಿಶಾಮಕ ಘಟಕಗಳ ಸಿಬ್ಬಂದಿಗಳು ಆಗಮಿಸಿ ಮೊದಲು ಅಂಗಡಿಗಳಿಗೆ ಬೆಂಕಿ ತಗಲುವುದನ್ನು ತಪ್ಪಿಸಿದ್ದರಿಂದ ಸಾಲು ಸಾಲು ಅಂಗಡಿಗಳು ಉಳಿದುಕೊಂಡಿವೆ. ಉಪ್ಪಿನಕೋಟೆಯ ಜೆಎಂಜೆ ಟ್ಯಾಂಕರ್ ನವರು ಅಗ್ನಿಶಾಮಕ ವಾಹನಗಳಿಗೆ ಸುಮಾರು 15 ಟ್ಯಾಂಕರ್ ನೀರನ್ನು ಒದಗಿಸಿದರು. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಳಿಗ್ಗೆಯ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ಸ್ಥಳಕ್ಕೆ ಮಾಜಿ ಸಚಿವ ಕೆ ಜಯಪ್ರಕಾಶ್ ಹೆಗ್ಡೆ, ಬ್ರಹ್ಮಾವರ ಸಿಪಿಐ ದಿವಾಕರ್, ಕೋಟ ಪಿಎಸ್ ಐ ರಾಘವೇಂದ್ರ, ಬ್ರಹ್ಮಾವರ ಪೊಲೀಸರು ಜಿಲ್ಲಾ ಅಗ್ನಿಶಾಮಕ ಆಧಿಕಾರಿ ವಿನಾಯಕ ಕಲ್ಗುಟಕರ್, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್, ಮಲ್ಪೆ ಅಗ್ನಿಶಾಮಕ ಠಾಣಾಧಿಕಾರಿ ಮಹಮ್ಮದ್ ಶಫಿ ಮೂರು ಠಾಣೆಗಳ ಪ್ರಮುಖ ಅಗ್ನಿಶಾಮಕರು ಹಾಗೂ ಸಿಬ್ಬಂದಿಗಳು ಬೆಂಕಿನಂದಿಸಲು ಹರ ಸಾಹಸ ಪಟ್ಟರು.