ಬ್ರಹ್ಮಾವರ ಮಟಪಾಡಿ ಪರಿಸರದಲ್ಲಿ ಚಿರತೆ ಕಾಟ; ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ
ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಮಟಪಾಡಿ ಪರಿಸರದಲ್ಲಿ ಕಳೆದ 3-4 ದಿನಗಳಿಂದ ಚಿರತೆ ಕಾಣಿಸಿಕೊಂಡಿದ್ದು ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳಿಂದ ಚಿರತೆಯು ರಾತ್ರಿ ಹೊತ್ತಿನಲ್ಲಿ ತಿರುಗಾಡಿರುವುದನ್ನು ಸ್ಥಳೀಯ ಜನರು ನೋಡಿದ್ದು, ಹತ್ತಿರದಲ್ಲಿಯೇ ಶಾಲೆಗಳಿದ್ದು ಮಕ್ಕಳನ್ನು ಶಾಲೆಗೆ ಕಳುಹಿಲು ಕೂಡ ಮನೆಯವರು ಹೆದರುತ್ತಿದ್ದಾರೆ.
ಚಿರತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸುತ್ತಿರುವುದರಿಂದ ಕೆಲಸ ಮಾಡಲು ಕೂಲಿ ಕಾರ್ಮಿಕರು ಭಯ ಪಡುತ್ತಿದ್ದಾರೆ. ಅಲ್ಲದೇ ಸುತ್ತಮುತ್ತಲ ಪ್ರದೇಶದಲ್ಲಿ ಪ್ರತಿಯೊಂದು ಮನೆಗಳಲ್ಲಿ ಸಾವಿರಾರೂ ರೂ. ಬೆಲೆ ಬಾಳುವ ಹಸುಗಳಿದ್ದು, ಇವುಗಳ ಮೇಲೆ ಚಿರತೆ ದಾಳಿ ನಡೆಸಿದರೆ ಬಹಳಷ್ಟು ನಷ್ಟವಾಗುವ ಸಂಭವವಿದೆ.
ಚಿರತೆ ಹಾವಳಿ ವಿಷಯ ಹಬ್ಬುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಚಿರತೆಯನ್ನು ಹಿಡಿಯಬೇಕು. ಇಲ್ಲವಾದರೆ ಚಿರತೆಯಿಂದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿದೆ. ಈ ಕುರಿತು ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.