ಬ್ರಹ್ಮಾವರ: ಮನೆ ಖರೀದಿಸಿ ಕೊಡುವುದಾಗಿ ಮಹಿಳೆಗೆ 93.70 ಲಕ್ಷ ರೂ ವಂಚನೆ – ಪ್ರಕರಣ ದಾಖಲು

Spread the love

ಬ್ರಹ್ಮಾವರ: ಮನೆ ಖರೀದಿಸಿ ಕೊಡುವುದಾಗಿ ಮಹಿಳೆಗೆ 93.70 ಲಕ್ಷ ರೂ ವಂಚನೆ – ಪ್ರಕರಣ ದಾಖಲು

ಉಡುಪಿ: ಮಹಿಳೆಯೋರ್ವರಿಗೆ ಮನೆ ಖರೀದಿ ಮಾಡಿ ಕೊಡುವುದಾಗಿ ಹೇಳಿ ವ್ಯಕ್ತಿಯೋರ್ವ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿರುವ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಗೊಳಗಾದ ಮಹಿಳೆ ಬ್ರಹ್ಮಾವರ ಸಮೀಪದ ಉಪ್ಪಿನಕೋಟೆಯವರಾಗಿದ್ದು ವಂಚಿಸಿದ ಆರೋಪಿಯನ್ನು ಬೈಂದೂರು ಬಿಜೂರು ನಿವಾಸಿ ಕೃಷ್ಣ ಬಿ ಎಂದು ಗುರುತಿಸಲಾಗಿದೆ.

ವಂಚನೆಗೊಳಗಾದ ಮಹಿಳೆ ತನ್ನ ತಂದೆ, ತಾಯಿ ಹಾಗೂ ಮಕ್ಕಳೊಂದಿಗ ವಾಸವಾಗಿದ್ದು, ಆಕೆಯ ಪತಿಯ ಸಂಬಂಧಿಯಾಗಿರುವ ಕೃಷ್ಣ ಬಿ ತಾನು ಲ್ಯಾಂಡ್ ಲಿಂಕ್ಸ್ ಮಾಡಿಕೊಂಡಿರುವುದಾಗಿ ನಂಬಿಸಿದ್ದು ಈ ವೇಳೆ ಖರೀದಿಸಲು ಒಂದು ಒಳ್ಳೆಯ ಮನೆ ಇದ್ದರೆ ಹೇಳು ಎಂದು ಹೇಳಿದ್ದರು. ಅದರಂತೆ ಆರೋಪಿ ಬ್ರಹ್ಮಾವರ ಪರಿಸರದಲ್ಲಿ ಮನೆಯೊಂದನ್ನು ತೋರಿಸಿ 16,00000 ರೂಗಳಿಗೆ ಮಾತನಾಡುವುದಾಗಿ ಹೇಳಿ ಮನೆಯ ಖರೀದಿಯ ಬಗ್ಗೆ ಫೆಬ್ರವರಿ 2021 ರಲ್ಲಿ ಮಹಿಳೆ ತನ್ನ ಪಿ ಎಫ್ ಹಣವನ್ನು ತೆಗೆದು 400000 ಕೊಟ್ಟಿದ್ದು ನಂತರ ಅವರ ತಮ್ಮನಿಗೆ ಹೇಳಿ 160000 ವನ್ನು ಆರೋಪಿಯ ಬ್ಯಾಂಕ್ ಖಾತೆಗೆ ಹಾಕಿರುತ್ತಾರೆ.

ಬಳಿಕ ಆರೋಪಿಯು ಮನೆಯ ವ್ಯಾಲ್ಯುವೇಶನ್ ಒಂದೂವರೆ ಕೋಟಿ ಇದ್ದು, ಮನೆಗೆ 27 ಲಕ್ಷ ರೂ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳಿದಾಗ, ಆರೋಪಿ ಕೃಷ್ಣ ಮಹಿಳೆಗೆ ಮೋಸ ಮಾಡುತ್ತಿರುವ ಬಗ್ಗೆ ಅನುಮಾನ ಬಂದು ನನಗೆ ಮನೆಯೂ ಬೇಡ ಜಾಗವು ಬೇಡ ನಾನು ಕೊಟ್ಟ ಹಣವನ್ನು ವಾಪಾಸು ಕೊಡುವಂತೆ ಕೇಳಿದ್ದ ವೇಳೆ ಮಹಿಳೆಯನ್ನು ಅವರ ಮನೆಯ ಒಳಗೆ ಕೂಡಿ ಹಾಕಿ ಕೈಯಿಂದ ಕೆನ್ನೆಗೆ ಮುಖಕ್ಕೆ ಹೊಡೆದು ನಿನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆ.

ಇದರಿಂದ ಮಹಿಳೆ ಹೆದರಿ ಅವರ ಹಾಗೂ ತಾಯಿ ಮತ್ತು ಸಂಬಂಧಿಕರ ಚಿನ್ನಾಭರಣಗಳನ್ನು ಅಡವಿರಿಸಿ ರೂ.34,50,000/- , ಜಾಗವನ್ನು ಅಡವಿರಿಸಿ ರೂ. 12,00,000/- ಹಣವನ್ನು ಅಲ್ಲದೇ ಮಹಿಳೆಯ ಗಂಡನ ವಿರುದ್ದ ಕೇಸು ನಡೆಸಲು ಕೋರ್ಟಿಗೆ ಮತ್ತು ವಕೀಲರಿಗೆ ಹಣ ಕೊಡಬೇಕು ಎಂದು ಹೇಳಿ ನಂಬಿಸಿದ್ದಕ್ಕೆ ಮಹಿಳೆ ತನ್ನ ಸ್ಯಾಲರಿ ಅಕೌಂಟ್ ಹಾಗೂ ಪರಿಚಯದವರು, ಸ್ನೇಹಿತರು ಮತ್ತು ಸಂಬಂದಿಕರಿಂದ ಸಾಲ ಮಾಡಿ ಹಾಗೂ ತಾನು ಹಾಗೂ ತನ್ನ ತಾಯಿ ಮಕ್ಕಳ ಹೆಸರಿನಲ್ಲಿ ಅಂಚೆ ಕಛೇರಿಯಲ್ಲಿಟ್ಟಿದ್ದ ಹಣ, ಮತ್ತು 3 ವರ್ಷಗಳ ತಿಂಗಳ ಸಂಬಳದ ಹಣ ಒಟ್ಟು ಸೇರಿ ರೂ. 15,20,000/- ಹಣವನ್ನು ಆರೋಪಿಗೆ ನೀಡಿರುತ್ತಾರೆ.

ಅಲ್ಲದೇ ಆರೋಪಿಯು ತನ್ನ ಹೆಂಡತಿಗೆ ಹುಷಾರಿಲ್ಲವೆಂದು ಸುಳ್ಳು ಹೇಳಿ ನಂಬಿಸಿ ಸೊಸೈಟಿ, ಫೈನಾನ್ಸ್, ಸ್ನೇಹಿತೆಯಿಂದ ಮಹಿಳೆ ಸಾಲ ಪಡೆದು ನೀಡಿದ ಒಟ್ಟು 4,50,000/-, ಸ್ನೇಹಿತೆಯ ಚಿನ್ನಾಭರಣಗಳನ್ನು ಆರೋಪಿಯ ಹೆಸರಿನಲ್ಲಿ ಅಡವಿಟ್ಟು ರೂ 7,50,000/ ಹಣವನ್ನು ಪಡೆದಿರುತ್ತಾನೆ. ಆರೋಪಿಯು ಮಹಿಳೆಯನ್ನು ನಂಬಿಸಿ ಒಟ್ಟು ರೂ 93,70,000/- ಪಡೆದುಕೊಂಡು ಅವರಿಗೆ ಮನೆಯನ್ನು ತೆಗೆಯಿಸಿಕೊಡದೇ, ಪಡೆದುಕೊಂಡ ಹಣವನ್ನು ವಾಪಾಸು ಕೊಡದೇ ವಂಚಿಸಿ ಮೋಸ ಮಾಡಿರುವುದಾಗಿ ವಂಚನೆಗೊಳಗಾದ ಮಹಿಳೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಲವರಿಗೆ ಮೋಸ ಮಾಡಿರುವ ಶಂಕೆ
ಆರೋಪಿ ಬೈಂದೂರು ಬಿಜೂರು ನಿವಾಸಿ ಕೃಷ್ಣ ಬಿ ಅವರು ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಶಂಕೆ ಇದ್ದು ಈತನಿಂದ ಮೋಸ ಹೋದವರು ಯಾರಾದರೂ ಇದ್ದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Spread the love