ಬ್ರಹ್ಮ ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆ – ಶ್ರೀನಿವಾಸ ಪೂಜಾರಿ
ಮಂಗಳೂರು: ಹಿಂದುಳಿದ ವರ್ಗ ಮತ್ತು ಹಿಂದುಳಿದ ಜನಾಂಗದವರ ಧ್ವನಿಗೆ ಶಕ್ತಿ ಕೊಡುವ ಮೂಲಕ ಅವರ ಏಳಿಗೆಗಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮವನ್ನು ಸ್ಥಾಪಿಸುವ ಕುರಿತು ಬೆಂಗಳೂರಿನಲ್ಲಿ ನಡೆಯುವ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸೆಪ್ಟೆಂಬರ್ 13 ರಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ಆಶ್ರಯದಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇವರ ಸಹಕಾರದೊಂದಿಗೆ ನಡೆದ 165ನೇ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಉದ್ಘಾಟಿಸಿ ಮಾತಾನಾಡಿದರು.
ಶತಮಾನದ ಹಿಂದಿನ ಸಾಮಾಜಿಕ ಸ್ಥಿತಿ ಗತಿಯನ್ನು ಅರಿತು ತನಗೆ ಬಂದ ಸಮಸ್ಯೆಗಳನ್ನು, ಸಂಘರ್ಷಗಳನ್ನು ಎದುರಿಸಿ ಇಡೀ ಜಗತ್ತಿಗೆ ಉತ್ತಮ ಸಂದೇಶವನ್ನು ಸಾರಿ, ಮನುಕುಲದ ಎಲ್ಲಾ ಜನಾಂಗದವರು ಸಮಾನತೆಯನ್ನು ಮೈಗೂಡಿಸಿ ಬಾಳುವಂತೆ ಹಾದಿ ತೋರಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ಆದರ್ಶ ಪುರುಷನಾಗಿದ್ದಾರೆ. ಸಮಾಜದಲ್ಲಿ ಧ್ವನಿ ಇಲ್ಲದರ ಪಾಲಿಗೆ ಧ್ವನಿಯಾಗಿ, ಭಾವನೆಗಳೇ ಇಲ್ಲದೆ ಇದ್ದವರಿಗೆ ಬದುಕನ್ನು ಕಟ್ಟಿ ಕೊಟ್ಟು, ಸಾಂತ್ವನದ ನುಡಿಗಳೊಂದಿಗೆ ಉತ್ತೇಜಿಸಿದ ಶ್ರೀ ನಾರಾಯಣ ಗುರು ಆಧುನಿಕ ಬ್ರಹ್ಮನಾಗಿ, ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ ಎಂದು ಅವರು ತಿಳಿಸಿದರು.
ಅಂದಿನ ದಿನಗಳಲ್ಲಿಯೇ ಏಕತೆ, ಸಮಾನತೆ ಬಗ್ಗೆ ಸಂದೇಶ ಸಾರಿದ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ವ್ಯಕ್ತಿತ್ವ ಬ್ರಹ್ಮ ಶ್ರೀ ನಾರಾಯಣ ಗುರುಗಳದ್ದು, ಸಮಾಜದಲ್ಲಿ ಸತ್ಪ್ರಜೆಯಾಗಿ, ಸಮಾನ ಮನೋಭಾವ ಹೊಂದಿ ಬದುಕು ಕಟ್ಟಿಕೊಳ್ಳಲು ಗುರುಗಳ ಸಂದೇಶ ಮಾರ್ಗದರ್ಶನವಾಗಿದೆ. ಮನುಷತ್ವ ಧರ್ಮಕ್ಕಿಂತ ಉತ್ತಮ ಧರ್ಮ ಬೇರೆ ಯಾವುದು ಇಲ್ಲ ಎಂಬುವುದನ್ನು ಗುರುಗಳು ಅಂದಿನ ದಿನಗಳಲ್ಲಿಯೇ ತಿಳಿಸಿಕೊಟ್ಟಿದ್ದಾರೆ. ಇಂತಹ ಜಯಂತಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಉಳಿಯದೆ ಸಮಾಜದ ಪ್ರತಿಯೊಬ್ಬರಿಗೂ ಜನಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಮುಂದಿನ ದಿನಗಳಲ್ಲಿ ನಡೆಯಬೇಕು ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಶಾಸಕ ಯು.ಟಿ ಖಾದರ್ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರು ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೇಶವ ಬಂಗೇರ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕನ್ನಡ ಮತ್ತು ಸಂಸ್ಸøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.