Home Mangalorean News Kannada News ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ಆಟಿ ಕಷಾಯ ವಿತರಣೆ

ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ಆಟಿ ಕಷಾಯ ವಿತರಣೆ

Spread the love

ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ಆಟಿ ಕಷಾಯ ವಿತರಣೆ

ಉಡುಪಿ: ಆಟಿ ಅಮವಾಸ್ಯೆಯ ಪ್ರಯುಕ್ತ ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ವಿಪ್ರಶ್ರೀ ಕಲಾಭವನ ಕೊಡವೂರು ಇಲ್ಲಿ ಗುರುವಾರದಂದು ಉಚಿತವಾಗಿ ಸಾರ್ವಜನಿಕರಿಗೆ ಹಾಲೆ ಮರದ ತೊಗಟೆಯ ಕಷಾಯ ನೀಡುವ ಕಾರ್ಯಕ್ರಮ ನಡೆಯಿತು.

ಎಸ್ ಡಿ ಎಮ್ ಆಸ್ಪತ್ರೆ ನಿವೃತ್ತ ವೈದ್ಯರಾದ ಡಾ| ಪ್ರಭಾಕರ ರೇಂಜಾಳ ಹಾಲೆ ಮರದ ತೊಗಟೆಯ ಕಷಾಯ ಕುಡಿಯುವುದರ ಕುರಿತು ಮಾಹಿತಿ ನೀಡಿದರು.

ಇದೇ ವೇಳೆ ಡಾ ಶ್ರೀಧರ್ ಬಾಯರಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಣೆ ಮಾಡಿದರು.

ಹಲವಾರು ಮಂದಿ ಜನರು ಕಷಾಯದ ಪ್ರಯೋಜನ ಪಡೆದುಕೊಂಡರು. ನಿಗದಿತ ಸಮಯದಲ್ಲಿ ಸಾರ್ವಜನಿಕರು ಸ್ವಪ್ರೇರಣೆಯಿಂದ ಕಷಾಯ ಸ್ವೀಕರಿಸಿದರು.ಹಲವರು ತಮ್ಮ ಮನೆಯವರಿಗೆ ಬಾಟಲುಗಳಲ್ಲಿ ಕಷಾಯ ತುಂಬಿಕೊಂಡು ಹೋಗುತ್ತಿದ್ದರು.

ಬ್ರಾಹ್ಮಣ ಮಹಾಸಭಾ ಕೊಡವೂರು ಅಧ್ಯಕ್ಷರಾದ ನಾರಾಯಣ ಬಲ್ಲಾಳ್, ಕಾರ್ಯದರ್ಶಿ ಶ್ರೀನಿವಾಸ ಬಾಯರಿ ಹಾಗೂ ಇತರರು ಉಪಸ್ಥಿತರಿದ್ದರು.

ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಗೆ ತುಂಬಾ ಪ್ರಾಮುಖ್ಯತೆ ಇದೆ. ಈ ಆಟಿ ಅಮವಾಸೆ ದಿನದಂದು ಹಾಲೆ ಮರದ ತೊಗಟೆಯ ಕಷಾಯವನ್ನು ಕುಡಿದರೇ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ, ಕರಾವಳಿ ಭಾಗದಲ್ಲಿದೆ.

ಮುಂಜಾನೆಯಿಂದಲೇ ಶ್ರದ್ಧಾಳುಗಳು ಹಾಲೆ ಮರದ ಬಳಿ ಬಳಿ ಜಮಾಯಿಸಿ, ಹಾಲೆ ಮರದ ತೊಗಟೆಯ ಕಷಾಯ ಸೇವಿಸಿದರು. ಆಯುರ್ವೇದದಲ್ಲಿ ಸಪ್ತಪರ್ಣ ಎಂದುಕರೆಸಿಕೊಳ್ಳುವ ಹಾಲೆ ಮರ, ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

ಆಟಿ ಅಮಾವಾಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಹಾಲೆಮರದ ತೊಗಟೆಯನ್ನು ಬಿಳಿಕಲ್ಲಿನಿಂದ ಜಜ್ಜಿ ತೆಗೆದು ತೊಗಟೆ ತರಲಾಗುತ್ತದೆ. ತೊಗಟೆಯನ್ನು ಜಜ್ಜಿ ರಸ ತೆಗೆದು ಕರಿಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಅರೆದು ಮನೆಮಂದಿಯೆಲ್ಲಾ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸಂಪ್ರದಾಯವಿದೆ.

ಹೀಗಾಗಿ ಆಟಿ ಅಮವಾಸೆ ದಿನ, ಈ ಮರದ ತೊಗಟೆಯ ಕಷಾಯ ಸೇವಿಸಿವುದು ಅನಾಧಿಕಾಲದಿಂದಲೂ ನಡೆದುಕೊಂಡು ಬಂದಿದ್ದು, ಔಷಧೀಯ ಗುಣವುಳ್ಳ ಆಟಿ ಕಷಾಯ ಸಹಿತ, ಮೆಂತೆಗಂಜಿ ಸವಿಯುವುದು ವಾಡಿಕೆ.

ಮರಕ್ಕೆ ಆಟಿ ತಿಂಗಳ ಅಮಾವಾಸ್ಯೆಯಂದು ವಿಶೇಷ ಔಷಧಿ ಗುಣ ಬರುತ್ತದೆ ಎಂಬ ನಂಬಿಕೆ. ಹಾಲೆಮರದ ತೊಗಟೆಯ ರಸ ಸೇವಿಸಿದರೆ ಹೊಟ್ಟೆನೋವು, ಕಫ ಮತ್ತಿತರೆ ಕಾಯಿಲೆಗಳು ಒಂದು ವರ್ಷ ಬರುವುದಿಲ್ಲ ಎಂಬ ನಂಬಿಕೆ ಇದೆ. ಹೀಗೆ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರಾವಳಿ ಜನರು ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ. ಔಷಧೀಯ ಕ್ಷೇತ್ರದಲ್ಲಿ ಎಷ್ಟೆ ಬದಲಾವಣೆಗಳಾದರೂ ಹಾಲೆಮರದ ತೊಗಟೆ ರಸದ ಕುರಿತು ಜನರ ನಂಬಿಕೆ ಬದಲಾಗದೆ ಸಾಮಾಜಿಕ, ಧಾರ್ಮಿಕವಾಗಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿದೆ.


Spread the love

Exit mobile version