ಬ್ರೇಕಿಂಗ್ ನ್ಯೂಸ್ ಆತಂಕ ಸೃಷ್ಟಿಸುವ ಬದಲು ಸಮಾಜಕ್ಕೆ ಸಾಂತ್ವನ ನೀಡಲಿ : ಬಂಟ್ವಾಳ ಡಿವೈಎಸ್ಪಿ ರವೀಶ್
ವಿಟ್ಲ: ಕೆಲವೊಂದು ಬಾರಿ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ಸಮಾಜದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವುದು ತೀರಾ ಕಳವಳಕಾರಿ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಸಮಾಜದಲ್ಲಿ ಆತಂಕ ಸೃಷ್ಟಿಸಿ ಹಾಕುವ ಬದಲು ಸಮಾಜಕ್ಕೆ ಸಾಂತ್ವನದ ಸಿಂಚನ ಮಾಡಬೇಕು ಎಂದು ಬಂಟ್ವಾಳ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ಹೇಳಿದರು.
ಕರಾವಳಿ ಟೈಮ್ಸ್ ಕನ್ನಡ ಪಾಕ್ಷಿಕದ ವಿಟ್ಲ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕಾ ಧರ್ಮ ಮೀರಿ ಕಾರ್ಯನಿರ್ವಹಿಸುವ ಮಾಧ್ಯಮಗಳ ಕ್ರಮವನ್ನು ಖಂಡಿಸಲೂ ಹಿಂದೆ ಮುಂದೆ ನೋಡುವುದಿಲ್ಲ ಎಂದರು. ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ, ಸಿಐಟಿಯು ಬಂಟ್ವಾಳ ಕಾರ್ಯದರ್ಶಿ ಎ. ರಾಮಣ್ಣ ವಿಟ್ಲ, ಎಸ್ ಡಿಪಿಐ ಜಿಲ್ಲಾ ಸದಸ್ಯ ಖಲಂದರ್ ಪರ್ತಿಪ್ಪಾಡಿ, ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ವಿ.ಎಚ್. ಅಶ್ರಫ್, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ ಮೊದಲಾದವರು ಭಾಗವಹಿಸಿದ್ದರು.