ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಉರ್ವ ಪೊಲೀಸ್ ಠಾಣಾ ಪ್ರಕರಣವೊಂದರಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಯವರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿರುತ್ತಾರೆ.
ಬಂಧಿತ ಆರೋಪಿಗಳನ್ನು ಆದಿತ್ಯ @ ಅಶ್ವಿನಿ (19) ಮತ್ತು ಅರುಣ್ ಹೆಚ್. ಎಸ್ (27) ಎಂದು ಗುರುತಿಸಲಾಗಿದೆ.
ಪ್ರಕರಣದ ಫಿರ್ಯಾಧಿದಾರರನ್ನು ಬೆಂಗಳೂರು ಮೂಲದ ಆರಾಧ್ಯ ಎಂಬ ಹೆಂಗಸಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿರುತ್ತಾರೆ. ಫಿರ್ಯಾಧಿದಾರರು ಆರೋಪಿಯ ಬೇಡಿಕೆಯಂತೆ ತಮ್ಮ ಭಾವಚಿತ್ರವನ್ನು ಕಳುಹಿಸಿಕೊಟ್ಟಿದ್ದು, ಈ ಭಾವಚಿತ್ರವನ್ನು ಪಡೆದುಕೊಂಡ ಆರೋಪಿ ಪೊಲೀಸರಿಗೆ ದೂರು ನೀಡಿ ಜೈಲಿಗೆ ಕಳುಹಿಸುವುದಾಗಿ ಬ್ಲಾಕ್ ಮೇಲ್ ಮಾಡಿ ಫಿರ್ಯಾಧಿದಾರರಿಂದ ರೂ 65.000/- ಹಣವನ್ನು ಬೆಂಗಳೂರಿನ ಯಶವಂತಪುರದಲ್ಲಿ ಪಡೆದುಕೊಂಡಿರುತ್ತಾರೆ. ನಂತರದಲ್ಲಿ ಪದೇ ಪದೇ ಫೋನ್ ಮಾಡಿ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುವ ಸಮಯ ಆರೋಪಿಗಳು ಫಿರ್ಯಾಧಿದಾರರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಸೋಗಿನಲ್ಲಿ ಕರೆ ಮಾಡಿ ಹೆದರಿಸಿರುತ್ತಾರೆ.
ಪ್ರಕರಣದ ಆರೋಪಿಗಳನ್ನು ದಿನಾಂಕ 02-10-2018 ರಂದು ಖಚಿತ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ದಸ್ತಗಿರಿ ಮಾಡಲಾಗಿರುತ್ತದೆ. ಈ ಪ್ರಕರಣದ ಮುಖ್ಯ ಆರೋಪಿ ಆರಾಧ್ಯ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾಕೆ ಪುರುಷ ವ್ಯಕ್ತಿ ಎಂಬುದು ದಸ್ತಗಿರಿ ಸಮಯ ತಿಳಿದು ಬಂದಿದ್ದು, ಹೆಂಗಸಿನ ವೇಷ ಧರಿಸಿ ಫಿರ್ಯಾಧಿದಾರರನ್ನು ನಂಬಿಸಿ ಬ್ಲಾಕ್ ಮೇಲ್ ಮಾಡಿರುತ್ತಾರೆ.
ಪೊಲೀಸ್ ಆಯುಕ್ತರಾದ ಟಿ. ಆರ್ ಸುರೇಶ್, ಐ.ಪಿ.ಎಸ್, ಪೊಲೀಸ್ ಉಪ ಆಯುಕ್ತರಾದ (ಅಪರಾಧ& ಸಂಚಾರ) ಉಮಾಪ್ರಶಾಂತ್, ಹಾಗೂ ಕೇಂದ್ರ ಉಪವಿಭಾಗದ ಎ.ಸಿ.ಪಿ ರವರಾದ ಉದಯ ನಾಯಕ್ ರವರ ಮಾರ್ಗದರ್ಶನದಲ್ಲಿ, ಉರ್ವ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.