Home Mangalorean News Kannada News ಭಕ್ತಿ ಭಾವದಿಂದ ಜರುಗಿದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

ಭಕ್ತಿ ಭಾವದಿಂದ ಜರುಗಿದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

Spread the love

ಭಕ್ತಿ ಭಾವದಿಂದ ಜರುಗಿದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

ಉಡುಪಿ : ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವವು ರವಿವಾರ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ ನಲ್ಲಿ ಜರಗಿತು.

ಪರಮಪ್ರಸಾದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ಆಶೀರ್ವಚನ ಸಂದೇಶ ನೀಡಿದ ಧರ್ಮಾಧ್ಯಕ್ಷರು ಯೇಸು ಸ್ವಾಮಿಯು ಈ ಜಗತ್ತಿಗೆ ಎಂದೂ ಕೂಡ ತನಗೆ ಸೇವೆಯನ್ನು ಬಯಸಿ ಬಂದಿಲ್ಲ ಬದಲಾಗಿ ಸೇವೆಯನ್ನು ನೀಡಲು ಬಂದರು. ತನ್ನ ಸೇವಾ ಮನೋಭಾವದೊಂದಿಗೆ ತನ್ನನ್ನೇ ತಾನು ಶಿಲುಬೆಯಲ್ಲಿ ಸಮರ್ಪಿಸಿಕೊಂಡರು. ಯೇಸು ಸ್ವಾಮಿ ಎಂದು ಕೂಡ ಈ ಭೂಮಿಯಲ್ಲಿ ತನ್ನ ರಾಜ್ಯವನ್ನು ವಿಸ್ತರಿಸಲಿಲ್ಲ ಬದಲಾಗಿ ನಮ್ಮ ಪಾಪಗಳಿಗೆ ಮುಕ್ತಿಯನ್ನು ನೀಡಿದರು. ಅದೇ ಯೇಸು ಸ್ವಾಮಿ ಆಶಿಸಿದ ಶಾಂತಿಯ ರಾಜ್ಯ ಸ್ಥಾಪನೆಗೆ ಪ್ರತಿಯೊಬ್ಬರು ಸದಾ ಕಟಿಬದ್ಧರಾಗಿರಬೇಕಾಗಿದೆ ಎಂದರು.

ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನ ದಲ್ಲಿ ಮಿಲಾಗ್ರಿಸ್ ಕ್ಯಾಥೆಡ್ರಲ್ ನಿಂದ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ತನಕ ರಾಜಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಬಹಿರಂಗ ಗೌರವ ಸಲ್ಲಿಸಲಾಯಿತು.

ಮೌಂಟ್ ರೋಸರಿ ಚರ್ಚಿಗೆ ತಲುಪಿದ ಬಳಿಕ ಅತ್ತೂರು ಸಂತ ಲಾರೆನ್ಸರ ಬೆಸಿಲಿಕಾದ ಸಹಾಯಕ ಧರ್ಮಗುರು ವಂ|ಮೆಲ್ವಿಲ್ ರೋಯ್ ಲೋಬೊ ಅವರು ಪ್ರವಚನ ನೀಡಿ ಪರಮ ಪ್ರಸಾದವು ಏಕತೆ, ತ್ಯಾಗ ಹಾಗೂ ಕ್ಷಮೆಯ ಸಂಕೇತವಾಗಿದ್ದು, ನಿಜವಾದ ಪ್ರೀತಿಯು ನಮ್ಮ ನೆರೆಹೊರೆಯವರಲ್ಲಿ ತೋರಿಸುವುದರಲ್ಲಿ ಅಡಗಿದ್ದು, ಯೇಸು ಸ್ವಾಮಿಯು ಶಿಲುಬೆಗೇರಿ ಅದನ್ನು ನಮಗೆ ತೋರಿಸಿಕೊಟ್ಟಿರುತ್ತಾರೆ. ಪರಮ ಪ್ರಸಾದವು ನಮ್ಮೆಲ್ಲರ ಭರವಸೆಯ ಬೆಳಕಾಗಿದ್ದು ಅದರ ಮೇಲೆ ನಂಬಿಕೆ ಇಟ್ಟವರನ್ನು ಎಂದಿಗೂ ಕೂಡ ಕೈ ಬಿಡಲ್ಲ ಎಂದರು.

ಮುಂದಿನ 2020 ರ ವರ್ಷವನ್ನು ಉಡುಪಿ ಧರ್ಮಪ್ರಾಂತ್ಯದಲ್ಲಿ ವಿಶೇಷ ಯೋಜನೆಯನ್ನು ರೂಪಿಸಿದ್ದು, ಧರ್ಮಪ್ರಾಂತ್ಯ ವ್ಯಾಪ್ತಿಯಲ್ಲಿ ಬರುವ ಚರ್ಚುಗಳಲ್ಲಿ ನಿವೇಶನ ಇದ್ದು ಸ್ವಂತ ಮನೆ ಕಟ್ಟಿಕೊಳ್ಳಲು ಅಶಕ್ತರಾಗಿರುವ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ವಿಶೇಷ ಯೋಜನೆ ಒಂದು ವರ್ಷ ನಿರಂತರವಾಗಿ ನಡೆಯಲಿದ್ದು ಧರ್ಮಪ್ರಾಂತ್ಯದ ಸಂತ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಇದರ ನೇತೃತ್ವ ವಹಿಸಿಲಿದ್ದು ಪ್ರತಿಯೊಬ್ಬ ಉತ್ತಮ ಯೋಜನೆಗೆ ಪ್ರೋತ್ಸಾಹ ನೀಡುವಂತೆ ವಿನಂತಿಸಿದರು.

ಉಡುಪಿ ಧರ್ಮಪ್ರಾಂತ್ಯವ್ಯಾಪ್ತಿಯ 52 ಚರ್ಚ್ಗಳಿಂದ ಸುಮಾರು 2500 ಕ್ಕೂ ಅಧಿಕ ಮಂದಿ ಭಕ್ತಾದಿಗಳು, 45ಕ್ಕೂ ಅಧಿಕ ಧರ್ಮಗುರುಗಳು, 100ಕ್ಕೂ ಅಧಿಧಕ ಧರ್ಮಭಗಿನಿಯರು ಭಾಗವಹಿಸಿದ್ದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್, ಕುಲಪತಿ ವಂ.ಸ್ಟ್ಯಾನಿ ಬಿ.ಲೋಬೊ, ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ.ಜೊಸ್ವಿ ಫೆರ್ನಾಂಡಿಸ್, ಉಡುಪಿ ವಲಯ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ.ಡಾ.ಲೆಸ್ಲಿ ಡಿಸೋಜ, ಮಿಲಾಗ್ರಿಸ್ ಕ್ಯಾಥೆಡ್ರಲ್ನ ಸಹಾಯಕ ಧರ್ಮಗುರು ವಂ.ಕೆನ್ಯೂಟ್ ನೊರೊನ್ಹಾ, ಅತ್ತೂರು ಸಂತ ಲಾರೆನ್ಸ್ ಬಾಸಿಲಿಕದ ವಂ | ಜೋರ್ಜ್ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ಧರ್ಮಪ್ರಾಂತ್ಯದ ಸೆನೆಟ್ ಸಭೆಯ ಕಾರ್ಯದರ್ಶಿ ವಂ|ಅನಿಲ್ ಪ್ರಕಾಶ್ ಧನ್ಯವಾದ ನೀಡಿದರು.


Spread the love

Exit mobile version