ಭಕ್ತ ಸಾಗರದ ನಡುವೆ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಮೈನರ್ ಬಾಸಿಲಿಕವಾಗಿ ಘೋಷಣೆ
ಕಾರ್ಕಳ: ಸಂತ ಲಾರೆನ್ಸ್ ಪುಣ್ಯಕ್ಷೇತ್ರವನ್ನು ಮೈನರ್ ಬಾಸಿಲಿಕವಾಗಿ ಸಮರ್ಪಣೆ ಹಾಗೂ ಘೋಷಣೆ ಕಾರ್ಯಕ್ರಮ ಸೋಮವಾರ ಪುಣ್ಯಕ್ಷೇತ್ರದ ವಠಾರದಲ್ಲಿ ಅದ್ದೂರಿಯಿಂದ ಜರುಗಿತು. ಕಾರ್ಯಕ್ರಮಕ್ಕೆ 12 ಸಾವಿರಕ್ಕೂ ಮಿಕ್ಕಿ ಜನರು ಸಾಕ್ಷಿಯಾದರು.
ಪವಿತ್ರ ಬಲಿಪೂಜೆಯ ನೇತೃತ್ವವನ್ನು ಆರ್ಚ್ ಬಿಷಪ್ ಮುಂಬಯ್ ಹಾಗೂ ಸಿಸಿಬಿಐ ಹಾಗೂ ಎಫ್ ಎ ಬಿಸಿ ಇದರ ಅಧ್ಯಕ್ಷರಾದ ಅತಿ ವಂ ಒಸ್ವಾಲ್ಡ್ ಕಾರ್ಡಿನಲ್ ಗ್ರೇಶಿಯಸ್ ವಹಿಸಿದ್ದು, ಗ್ಲೋರಿಯ ಸ್ತುತಿಗೀತೆಯ ಮುನ್ನ ಸೀರೊ ಮಲಂಕರ ಕ್ಯಾಥೊಲಿಕ್ ಧರ್ಮಸಭೆಯ ಮೇಜರ್ ಆರ್ಚ್ಬಿಷಪ್ ಹಾಗೂ ಕ್ಯಾಥೊಲಿಕೊಸ್ ಅತಿ ವಂ ಬಾಸೆಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಅವರು ಮೈನರ್ ಬಾಸಿಲಿಕಾದ ಅಧಿಕೃತ ಘೋಷಣೆಯನ್ನು ಲ್ಯಾಟಿನ್ ಭಾಷೆಯಲ್ಲಿ ಮಾಡಿ ಅಧಿಕೃತ ಆದೇಶಪತ್ರವನ್ನು ಕ್ಷೇತ್ರದ ರೆಕ್ಟರ್ ವಂ ಜೋರ್ಜ್ ಡಿ’ಸೋಜಾ ಅವರಿಗೆ ಹಸ್ತಾಂತರಿಸಿದರು. ಇದರ ಕೊಂಕಣಿ ಅನುವಾದವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಮಾಡಿದರು.
ಬಲಿಪೂಜೆಯಲ್ಲಿ ಪ್ರವಚನ ನೀಡಿದ ಬೆಂಗಳೂರು ಮಹಾಧರ್ಮಾಧ್ಯಕ್ಷ ವಂ ಡಾ ಬರ್ನಾಡ್ ಮೋರಾಸ್ ಅವರು ಸಂತ ಲಾರೆನ್ಸರ ಜೀವನದ ಚರಿತ್ರೆಯನ್ನು ವಿವರಿಸಿ ತನ್ನ ಜೀವನದುದ್ದಕ್ಕೂ ಸಂತ ಲಾರೆನ್ಸ್ ದೇವರ ವಾಕ್ಯದಂತೆ ನಡೆದರು ಎಂದರು.
ಸಾಮೂಹಿಕ ಕೃತಜ್ಞತಾ ಬಲಿಪೂಜೆಯ ಬಳಿಕ ನಡೆದ ಸಾರ್ವಜನಿ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀರೊ ಮಲಂಕರ ಕ್ಯಾಥೊಲಿಕ್ ಧರ್ಮಸಭೆಯ ಮೇಜರ್ ಆರ್ಚ್ಬಿಷಪ್ ಹಾಗೂ ಕ್ಯಾಥೊಲಿಕೊಸ್ ಅತಿ ವಂ ಬಾಸೆಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅತೂರು ಕ್ಷೇತ್ರ ಎಲ್ಲಾ ಧರ್ಮದ ಭಕ್ತಾದಿಗಳನ್ನು ಆಕರ್ಷಿಸುವ ತಾಣವಾಗಿದ್ದು, ಮೈನರ್ ಬಾಸಿಲಿಕಾವಾಗಿ ಘೋಷಣೆಯಾಗಿರುವುದು ಜಿಲ್ಲೆ ಮಾತ್ರವಲ್ಲ ರಾಜ್ಯಕೆ ಹೆಮ್ಮೆಯ ಸಂಗತಿಯಾಗಿದೆ. ಅತ್ತೂರು ಕ್ಷೇತ್ರ ಕೋಮುಸಾಮರಸ್ಯಕ್ಕೆ ಇಡೀ ದೇಶಕಕ್ಕೆ ಮಾದರಿಯಾಗಲಿ ಎಂದರು.
ಸೀರೊ ಮಲಂಕರ ಕ್ಯಾಥೊಲಿಕ್ ಧರ್ಮಸಭೆಯ ಮೇಜರ್ ಆರ್ಚ್ಬಿಷಪ್ ಹಾಗೂ ಕ್ಯಾಥೊಲಿಕೊಸ್ ಅತಿ ವಂ ಬಾಸೆಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಮೈನರ್ ಬಾಸಿಲಿಕಾದ ನಾಮಫಲಕವನ್ನು ಅನಾವರಣಗೋಳಿಸಿದರು. ಇನ್ನೋರ್ವ ಸೀರೊ ಮಲಬಾರ್ ಕೆಥೊಲಿಕ್ ಚರ್ಚಿನ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಮಾರ್ ಜೋರ್ಜ್ ಅಲಂಚೇರಿ ಅವರು ಮೈನರ್ ಬಾಸಿಲಿಕಾದ ಅಧಿಕೃತ ಧ್ವಜವನ್ನು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಸೀರೊ ಮಲಂಕರ ಕ್ಯಾಥೊಲಿಕ್ ಧರ್ಮಸಭೆಯ ಮೇಜರ್ ಆರ್ಚ್ಬಿಷಪ್ ಹಾಗೂ ಕ್ಯಾಥೊಲಿಕೊಸ್ ಅತಿ ವಂ ಬಾಸೆಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಅವರು ಉಡುಪಿ ಧರ್ಮಧ್ಯಕ್ಷರು ಮಾಡುತ್ತಿರುವ ಅತ್ಯುತ್ತಮ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೀರೊ ಮಲಬಾರ್ ಕೆಥೊಲಿಕ್ ಚರ್ಚಿನ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಮಾರ್ ಜೋರ್ಜ್ ಅಲಂಚೇರಿ ಅವರು ಮೈನರ್ ಬೆಸಿಲಿಕಾ ದೇಶದ ಎಲ್ಲಾ ಸಮುದಾಯಗಳನ್ನು ತನ್ನತ್ತ ಆಕರ್ಷಿಸಿಸುವ ಶೃದ್ಧಾಕೇಂದ್ರವಾಗಿ ಹೊರಹೊಮ್ಮಲಿ ಎಂದರು.
ಪೋಪ್ ಫ್ರಾನ್ಸಿಸ್ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಕಳುಹಿಸಿದ ಸಂದೇಶವನ್ನು ಲ್ಯಾಟಿನ್ ಭಾಷೆಯಲ್ಲಿ ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ ಬರ್ನಾಡ್ ಮೋರಾಸ್ ವಾಚಿಸಿದರು. ಮಂಗಳೂರು ಧರ್ಮಧ್ಯಕ್ಷ ಡಾ ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಪೋಪ್ ಅವರ ಭಾರತದ ಪ್ರತಿನಿಧಿ ಡಾ ಸಾಲ್ವತೊರೆ ಪೆನ್ನಾಚಿಯೊ ಅವರು ಕಳುಹಿಸಿದ ಪ್ರಾರ್ಥನಾ ವಿಧಿಯ ಪ್ರಾರ್ಥನ ಪಾತ್ರೆಯನ್ನು ಕ್ಷೇತ್ರದ ರೆಕ್ಟರ್ ಜೋರ್ಜ್ ಡಿ’ಸೋಜಾರಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿ ಸುನಿಲ್ ಕುಮಾರ್ ಮಾತನಾಡಿ ಮೈನರ್ ಬಾಸಿಲಿಕಾದ ಘೋಷಣೆಯಿಂದ ಕಾರ್ಕಳ ಇಂದು ವಿಶ್ವ ಮಾನ್ಯತೆಯನ್ನು ಪಡೆಯಲು ಕಾರಣವಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವದೊಂದಿಗೆ ಸೂಕ್ತ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದರು.
ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ, ಆರ್ಚ್ ಬಿಷಪ್ ಮುಂಬಯ್ ಹಾಗೂ ಸಿಸಿಬಿಐ ಹಾಗೂ ಎಫ್ ಎ ಬಿಸಿ ಇದರ ಅಧ್ಯಕ್ಷರಾದ ಅತಿ ವಂ ಒಸ್ವಾಲ್ಡ್ ಕಾರ್ಡಿನಲ್ ಗ್ರೇಶಿಯಸ್, ಆರ್ಚ್ಬಿಷಪ್ಗಳಾದ ವಂ ಡಾ ಅನಿಲ್ ಕುಟ್ಟೊ, ಫಿಲಿಪ್ ನೇರಿ ಫೆರಾವೊ, ಪಿಯುಸ್ ಡಿಸೋಜಾ, ಬಿಷಪ್ಗಳಾದ ಇಗ್ನೇಶಿಯಸ್ ಡಿ’ಸೋಜಾ, ಸಾಲ್ವದೊರ್ ಲೋಬೊ, ಜೇರಾಲ್ಡ್ ಆಲ್ಮೇಡಾ, ಅಲೇಕ್ಸ್ ವಡಾಕುಮತಾಲ, ಜೆರಾಲ್ಡ್ ಮಥಾಯಸ್, ವರ್ಗಿಸ್ ಚಕ್ಕಲ್, ಪೀಟರ್ ಮಚಾದೊ, ಲಾರೆನ್ಸ್ ಮುಕ್ಕುಜಿ, ಅಂತೋನಿ ಸ್ವಾಮಿ, ರೋಬರ್ಟ್ ಮಿರಾಂದ, ಡೆರಿಕ್ ಫೆನಾಂಡಿಸ್, ಅಚಿಟನಿ ಕರಿಯಿಲ್, ತೋಮಸ್ ವಾಜಪಿಳ್ಳೈ, ಗೀವರ್ಗಿಸ್ ಮಾರ್ ದಿವಾನ್ನಿಯೊಸ್, ಫ್ರಾನ್ಸಿಸ್ ಸೆರಾವೊ ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ ಜೆರಾಲ್ಡ್ ಐಸಾಕ್ ಲೋಬೊ ಸ್ವಾಗತಿಸಿ, ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್ ವಂದಿಸಿದರು. ವಂ ಸ್ಟೀವನ್ ಡಿ’ಸೋಜಾ ಧಾರ್ಮಿಕ ವಿಧಿಯ ಕಾರ್ಯಕ್ರಮ ನಿರೂಪಿಸಿದರೆ, ವಂ ಡೆನಿಸ್ ಡೆಸಾ ಹಾಗೂ ಡಾ ವಿನ್ಸೆಂಟ್ ಆಳ್ವಾ ಸಭಾ ಕಾರ್ಯಕ್ರಮ ನಿರೂಪಿಸಿದರು.