ಭಗಿನಿ ಸಮಾಜದ ಮಕ್ಕಳೊಂದಿಗೆ ದೀಪಾವಳಿ ಸಂಭ್ರಮಿಸಿದ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಸದಸ್ಯರು
ಮಂಗಳೂರು: ವಿಶ್ವದೆಲ್ಲೆಡೆ ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ದೀಪಗಳ ಹಬ್ಬವನ್ನು ಮಂಗಳಮುಖಿಯರ ಅಭಿವೃದ್ಧಿಗಾಗಿ ಸದಾ ಮಂಚೂಣಿಯಲ್ಲಿರುವ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಸದಸ್ಯರು ಗುರುವಾರ ನಗರದ ಭಗಿನ ಸಮಾಜದಲ್ಲಿ ಅನಾಥ ಮಕ್ಕಳೊಂದಿಗೆ ಸೇರಿ ಅರ್ಥಪೂರ್ಣವಾಗಿ ಆಚರಿಸಿದರು.
ಭಗಿನಿ ಸಮಾಜದ ಇದರ ಅಧ್ಯಕ್ಷರಾದ ವಿಜಯಲಕ್ಷ್ಮೀ ಭಟ್ ಮಾತನಾಡಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಈ ಬಾರಿಯ ದೀಪಾವಳಿಯನ್ನು ಭಗಿನಿ ಸಮಾಜದ ಮಕ್ಕಳೊಂದಿಗೆ ಆಚರಿಸುವುದರೊಂದಿಗೆ ಅವರುಗಳ ಮುಖದಲ್ಲಿ ನಗೆಯನ್ನು ಮೂಡಿಸುವ ಕೆಲಸವನ್ನು ಮಾಡಿದೆ. 81 ವರ್ಷದ ನಮ್ಮ ಸಂಸ್ಥೆಯಲ್ಲಿ 45 ಮಂದಿ ಮಕ್ಕಳಿದ್ದು ಅವರುಗಳ ಪಾಲನೆ ಪೋಷಣೆಯನ್ನು ದಾನಿಗಳ ಸಹಕಾರದೊಂದಿಗೆ ಮಾಡಿಕೊಂಡು ಬಂದಿರುತ್ತೇವೆ ಎಂದರು.
ಟ್ರಸ್ಟಿನ ಕಾರ್ಯದರ್ಶಿ ಸಂಜನಾ ಮಾತನಾಡಿ ದೀಪಾವಳಿ ಹಬ್ಬ ಬೆಳಕಿನ ಹಬ್ಬ ನಾವು ನಮ್ಮ ಊರನ್ನು ಬಿಟ್ಟು ಮಂಗಳೂರಿಗೆ ಬಂದ ವೇಳೆ ನಿಜವಾಗಿ ನಾವು ನಮ್ಮ ಬೆಳಕನ್ನು ಕಳೆದುಕೊಂಡಿದ್ದೇವೆ ಅಂತಹ ಸಮಯದಲ್ಲಿ ಪರಿವರ್ತನಾ ಚಾರೀಟೇಬಲ್ ಇದರ ಸಂಸ್ಥಾಪಕರಾದ ವಾಯ್ಲೆಟ್ ಪಿರೇರಾ ಅವರು ನಮ್ಮ ಕೈಯನ್ನು ಹಿಡಿದರು. ಅವರು ನಿಜವಾಗಿಯೂ ನಮ್ಮ ಜೀವನದ ಬಹುದೊಡ್ಡ ರೋಲ್ ಮಾಡೆಲ್ ಆಗಿದ್ದಾರೆ. ಸಮಾಜ ನಮ್ಮನ್ನು ಕೆಟ್ಟ ದೃಷ್ಠಿಯಿಂದ ನೋಡುತ್ತಿದ್ದ ಸಮಯದಲ್ಲಿ ಅಂತಹ ಪರಿಸ್ಥಿತಿಯನ್ನು ಹೋಗಲಾಡಿಸುವಲ್ಲಿ ಅವರು ಪ್ರಯತ್ನಪಟ್ಟಿದ್ದಾರೆ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇಂದು ಇಲ್ಲಿ ದೀಪಾವಳಿಯ ಸಂತೋಷವನ್ನು ಹಂಚಿಕೊಳ್ಳಲು ಬಂದಿದ್ದೇವೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ದೀಪಾವಳಿಯ ಪ್ರಯುಕ್ತ ಆಕಾಶ ಬುಟ್ಟಿಗಳನ್ನು ಹಾರಿಸುವುದರ ಮೂಲಕ ಮಕ್ಕಳೊಂದಿಗೆ ಸಂಭ್ರಮಿಸಲಾಯಿತು. ಇದೇ ವೇಳೆ ದಾನಿ ಓರ್ಫಾ ಸುವಾರಿಸ್ ಅವರು ನೀಡಿದ ರೂ. 11250 ನ್ನು ಪರಿವರ್ತನಾ ಚಾರೀಟೆಬಲ್ ವತಿಯಿಂದ ಭಗಿನಿ ಸಮಾಜಕ್ಕೆ ಹಸ್ತಾಂತರಿಸಲಾಯಿತು.
ಭಗಿನಿ ಸಮಾಜದ ಉಪಾಧ್ಯಕ್ಷ ರತ್ನಾ ಟಿ ಆಳ್ವಾ, ಕಾರ್ಯದರ್ಶಿ ಚೈತ್ರಾ ಪ್ರಭು, ಸಹಕಾರ್ಯದರ್ಶಿ ಭಾನುಮತಿ, ಪರಿವರ್ತನಾ ಟ್ರಸ್ಟಿನ ಸಬ್ರೀನಾ ಬ್ರಿಟ್ಟೊ, ರೆಗೋ ಇವೆಂಟ್ಸ್ ಇದರ ಜೋಯ್ಸ್ ರೇಗೊ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.