ಭಟ್ಕಳದಲ್ಲಿ ಕಾರು – ಟ್ಯಾಂಕರ್ ಮುಖಾಮುಖಿ ಡಿಕ್ಕಿ; ಉಪ್ಪುಂದದ ಮತ್ಸ್ಯೋದ್ಯಮಿ ಸಾವು
ಭಟ್ಕಳ: ಕಾರು ಹಾಗೂ ಟ್ಯಾಂಕರ್ ನಡುವೆ ನಡೆದ ಮುಖಾಮುಖಿ ಅಫಘಾತದಲ್ಲಿ ಹೆಸರಾಂತ ಮತ್ಸ್ಯೋದ್ಯಮಿ ಮೃತಪಟ್ಟು ಇತರ 9 ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಾವಿನಕಟ್ಟೆ ಭಟ್ಕಳ ಬಳಿ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಬೈಂದೂರು ತಾಲೂಕು ಉಪ್ಪುಂದದ ಮತ್ಸ್ಯೋದ್ಯಮಿ ಅಣ್ಣಪ್ಪ ಖಾರ್ವಿ (60) ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಮೃತರ ಪತ್ನಿ ಮೂಕಾಂಬೆ ಖಾರ್ವಿ, ಸುಬ್ರಹ್ಮಣ್ಯ ಖಾರ್ವಿ, ಪ್ರಭಾಕರ ಖಾರ್ವಿ, ನಾಗವೇಣಿ ಖಾರ್ವಿ, ಪುಷ್ಪಾ, ಶಾರದಾ ಹಾಗೂ ಇತರ ಮೂವರು ಮಕ್ಕಳು ಸೇರಿದ್ದಾರೆ.
ಶಿರಸಿಯಲ್ಲಿ ನಡೆಯುತ್ತಿರುವ ಮಾರಿಕಾಂಬೆಯ ಜಾತ್ರೆಗೆ ಹೋಗಿದ್ದ ಖಾರ್ವಿ ಕುಟುಂಬ ಜಾತ್ರೆಯಲ್ಲಿ ಭಾಗವಹಿಸಿ ವಾಪಾಸು ಮರಳುತ್ತಿದ್ದಾಗ ಅಫಘಾತ ಸಂಭವಿಸಿದ್ದು, ಅಫಘಾತಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟ್ಯಾಂಕರ್ ಮಗುಚಿ ಬಿದ್ದಿದೆ.
ಟ್ಯಾಂಕರಿನಿಂದ ತೈಲ ಸೋರಿಕೆಯಾಗಿ ಅಪಾಯದ ಸೂಚನೆ ಇರುವುದರಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮುನ್ನಚ್ಚರಿಕೆಯ ಕ್ರಮ ಕೈಗೊಂಡಿದೆ.
ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.