ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ನಸ್ತಾರ, ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೆಕೇರಿ ಸೇರಿದಂತೆ ವಿವಿದೆಡೆ ಹತ್ತಾರು ಎಕರೆ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿದ್ದು, ಬೆಳೆ ನಾಶವಾಗಿದೆ. ಉಪ್ಪು ನೀರು ಹಿಂದಿರುಗಿ ಹರಿಯುವುದನ್ನೇ ರೈತರು ಕಾಯುತ್ತ ಸಂಕಟವನ್ನು ಅನುಭವಿಸುತ್ತಿದ್ದಾರೆ.
ಮಳೆಗಾಲ ಎನ್ನುವುದು ಸಮುದ್ರ ತಟದ ರೈತರ ಪಾಲಿಗೆ ಯಮ ಯಾತನೆಯನ್ನು ನೀಡುತ್ತಿದೆ. ಕಡಲ ಕೊರೆತ ಮರಳಿನೊಂದಿಗೆ ಕಲ್ಲುಗಳನ್ನು ಕಿತ್ತೆಸೆಯುತ್ತಿದ್ದು, ನೀರು ಮೇಲ್ಮುಖವಾಗಿ ನುಗ್ಗುತ್ತಿದೆ. ಗದ್ದೆಗಳಲ್ಲಿ ತುಂಬಿಕೊಳ್ಳುವ ಉಪ್ಪು ನೀರು ಅಡ್ಡಲಾಗಿ ನಿರ್ಮಾಣವಾಗುವ ಮರಳಿನ ದಿಬ್ಬದಿಂದಾಗಿ ಹೊಳೆಯಾಗಿ ಪರಿವರ್ತನೆಯಾಗುತ್ತಿದೆ. ಪುಟ್ಟ ಕಾಲುವೆಗಳಿಗೆ ಹಲಗೆಗಳನ್ನು ಅಳವಡಿಸಿ ಒಳ ಬರುವ ನೀರನ್ನು ತಡೆದು ಹೊರಕ್ಕೆ ಹರಿದು ಹೋಗಲು ಅವಕಾಶ ಕಲ್ಪಿಸಬೇಕಿದೆ. ಆದರೆ ಪ್ರತಿ ಮಳೆಗಾಲದಲ್ಲಿ ರೈತರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುತ್ತ ಬಂದರೂ ಇತ್ತ ಲಕ್ಷ್ಯ ವಹಿಸುವವರು ಯಾರೂ ಇಲ್ಲದಾಗಿದೆ. ಮೊದಲೇ ಲಾಭ, ನಷ್ಟದ ಉಯ್ಯಾಲೆಯೊಳಗೆ ಸಿಲುಕಿ ಕೃಷಿ ಚಟುವಟಿಕೆಯಿಂದ ವಿಮುಖನಾಗುತ್ತಿರುವ ಸ್ಥಳೀಯ ತುಂಡು ಭೂಮಿಯ ರೈತನಿಗೆ ಉಪ್ಪು ನೀರಿನ ಹಾವಳಿ ಎನ್ನುವುದು ಇನ್ನಷ್ಟು ಬೇಸರ ತರಿಸಿದೆ.
ಕೃಷಿಗೆ ಉತ್ತೇಜನದ ಮಾತನಾಡುತ್ತಿರುವ ಸರಕಾರ, ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ತಾಲೂಕಾಡಳಿತ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.