ಭಟ್ಕಳ: ಸಿದ್ದರಾಮಯ್ಯ ತುಘಲಕ್ ಆಡಳಿತ ನಡೆಸುತ್ತಿದ್ದಾರೆ : ಶೋಭಾ ಆರೋಪ

Spread the love

ಭಟ್ಕಳ: ಬಿಜೆಪಿ ಅಧಿಕಾರದಲ್ಲಿದ್ದಾಗ ತಂದ ಜನಪರ ಯೋಜನೆಗಳನ್ನು ಮುಂದುವರೆಸಲು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಆಸಕ್ತಿ ಇಲ್ಲ. 2014ನೇ ಇಸವಿಯಲ್ಲಿ ಕೇವಲ 1 ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡಲಾಗಿದೆ. ತುಘಲಕ್ ಆಡಳಿತದಂತೆ ಸರಕಾರ ತಿಂಗಳಿಗೊಂದರಂತೆ ಸುತ್ತೋಲೆ ಹೊರಡಿಸುತ್ತಿದ್ದು, ಆಡಳಿತ ಹದಗೆಟ್ಟು ಹೋಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

1

 ಅವರು ಮಂಗಳವಾರ ಭಟ್ಕಳ ಗೋಪಾಲಕೃಷ್ಣ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪಂಚಾಯತ ರಾಜ್ಯ ಇಲಾಖೆಯ ಮಂತ್ರಿಗಳ ಜಿಲ್ಲೆಯಲ್ಲಿಯೇ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗದೇ ವಿಆರ್‍ಎಸ್ ನೀಡಲು ಮುಂದಾಗಿರುವುದು ಸರಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದ ಅವರು, ರಾಜ್ಯ ನೀರಾವರಿ, ಪಿಡಬ್ಲ್ಯೂಡಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಶೂನ್ಯ ಅಭಿವೃದ್ಧಿಯನ್ನು ಸಾಧಿಸಿದೆ. ಮಳೆಗಾಲ ಸಮೀಪಿಸುತ್ತಿದ್ದರೂ, ಆಶ್ರಯ ಮನೆಗಳಿಗಾಗಿ ಕಾದು ಕುಳಿತಿರುವ ಬಡವರ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ. ಅಹಿಂದ ಪರ ಸರಕಾರ ಎಂದು  ಘೋಷಣೆ ಮಾಡಲಾಗುತ್ತಿದ್ದರೂ ಆ ವರ್ಗದ ಜನರ ಪರವಾಗಿ ಸರಕಾರ ಏನನ್ನೂ ಮಾಡುತ್ತಿಲ್ಲ. ಹಿಂದುಳಿದ ವರ್ಗದ ರೈತರಿಗೆ ಒಂದೇ ಒಂದು ಬೋರ್‍ವೆಲ್ ನೀಡಲೂ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಯೂ ಕುಂಠಿತಗೊಂಡಿದೆ. ಸರಕಾರ ಕಾರ್ಯಕ್ಷಮತೆಯ ಕೊರತೆಯ ಕಾರಣ ಯಾರೂ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಕೈಗಾರಿಕೆಗಳು ಪಕ್ಕದ ಆಂಧ್ರಪ್ರದೇಶಗಳತ್ತ ಪಲಾಯನಗೈಯುತ್ತಿವೆ ಎಂದು ಆಪಾದಿಸಿದರು. ಅಭಿವೃದ್ಧಿಯ ಪಾಲುದಾರರಾಗಲು ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಪ್ರವಾಸಕ್ಕೆ ಸಿದ್ದರಾಮಯ್ಯನವರನ್ನು ಆಹ್ವಾನಿಸಿದ್ದರೂ, ರಾಜಕೀಯ ಕಾರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಅವರೊಂದಿಗೆ ತೆರಳದೇ ಅವಕಾಶಗಳು ಕಳೆದುಹೋಗುವಂತೆ ಮಾಡಿದ್ದಾರೆ. ಇಷ್ಟಿದ್ದರೂ ಮೋದಿಯವರು ರಾಜ್ಯದ ಅಭಿವೃದ್ಧಿಗಾಗಿ ಚೀನಾದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಇದು ಬಿಜೆಪಿ ಪಕ್ಷದ ಬದ್ಧತೆಯನ್ನು ತೋರಿಸುತ್ತದೆ ಎಂದ ಕರಂದ್ಲಾಜೆ, ರಾಜ್ಯದ ಸಚಿವರು ತಮ್ಮ ಸ್ವಕ್ಷೇತ್ರವನ್ನು ಬಿಟ್ಟು ಪಕ್ಕದ ಕ್ಷೇತ್ರಕ್ಕೂ ಕಾಲಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತೆ ಪ್ರಯತ್ನಿಸಲಾಗುತ್ತಿದೆ. ರಾಜ್ಯದ 2500ಕ್ಕೂ ಹೆಚ್ಚು ಪಂಚಾಯತಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿಜಯಶಂಕರ, ಶಿವಾನಂದ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎಮ್.ಜಿ.ನಾಯ್ಕ, ಕಾರ್ಯದರ್ಶಿ ಕೃಷ್ಣ ನಾಯ್ಕ ಆಸರಕೇರಿ, ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ಈಶ್ವರ ದೊಡ್ಮನೆ, ಎನ್.ಎಸ್.ಹೆಗಡೆ, ವಿನೋದ ನಾಯ್ಕ, ಲೋಕೇಶ ಮೇಸ್ತ, ಜಿಲ್ಲಾ ಪಂಚಾಯತ ಸದಸ್ಯೆ ಸವಿತಾಗೊಂಡ ಮುಂತಾದವರು ಉಪಸ್ಥಿತರಿದ್ದರು.


Spread the love