Home Mangalorean News Kannada News ಭಟ್ಟರೇ, ಸ್ವಾಭಿಮಾನ, ಮರ್ಯಾದೆ ಎನ್ನುವುದು ಧರ್ಮ, ಕೋಮುಗಳನ್ನು ಅವಲಂಬಿಸಿರುವುದಿಲ್ಲ- ಗೀತಾ ವಾಗ್ಳೆ

ಭಟ್ಟರೇ, ಸ್ವಾಭಿಮಾನ, ಮರ್ಯಾದೆ ಎನ್ನುವುದು ಧರ್ಮ, ಕೋಮುಗಳನ್ನು ಅವಲಂಬಿಸಿರುವುದಿಲ್ಲ- ಗೀತಾ ವಾಗ್ಳೆ

Spread the love

ಭಟ್ಟರೇ, ಸ್ವಾಭಿಮಾನ, ಮರ್ಯಾದೆ ಎನ್ನುವುದು ಧರ್ಮ, ಕೋಮುಗಳನ್ನು ಅವಲಂಬಿಸಿರುವುದಿಲ್ಲ- ಗೀತಾ ವಾಗ್ಳೆ

ಉಡುಪಿ: ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತಾಗಿ ಹೇಳಿರುವ ಮಾತುಗಳು ಒಬ್ಬ ನಿಜವಾದ ಹಿಂದುವಿಗೆ ಅವಮಾನ ಮಾಡಿದಂತಿದೆ.ಯಾಕೆಂದರೆ ಹಿಂದೂಗ್ರಂಥಗಳಲ್ಲಿ ಮಹಿಳೆಗೆ ಬಹಳ ಉನ್ನತ ಸ್ಥಾನವನ್ನು ನೀಡಲಾಗಿದೆ. ಯಾವುದೇ ಗ್ರಂಥಗಳಲ್ಲಿ ಕೇವಲ ಹಿಂದೂ ಮಹಿಳೆಯರಿಗೆ ಮಾತ್ರ ಈ ಗೌರವವನ್ನು ಸೀಮಿತಗೊಳಿಸಿಲ್ಲ. ಯತ್ರ ನಾರ್ಯಸ್ತು ಪೂಜ್ಯಂತೆ,ರಮಂತೆ ತತ್ರ ದೇವತಾ ಎಂದು ಗ್ರಂಥಗಳಲ್ಲಿ ಬರೆದಿದೆಯೇ ಹೊರತು ಯತ್ರ ಹಿಂದೂ ನಾರ್ಯಸ್ತು ಪೂಜ್ಯಂತೆ ಎಂದು ಬರೆದಿಲ್ಲ. ಆದ್ದರಿಂದ ಎಲ್ಲಾ ಧರ್ಮಗಳ ,ಎಲ್ಲಾ ಕೋಮುಗಳ ಮಹಿಳೆಯರೂ ಪೂಜನೀಯರೇ. ಆದ್ದರಿಂದ ಸ್ವಾಭಿಮಾನ, ಮರ್ಯಾದೆ ಎನ್ನುವುದು ಕೂಡಾ ಕೇವಲ ಹಿಂದೂ ಮಹಿಳೆಯರಿಗೆ ಸೀಮಿತವಾಗಿರದೇ ಎಲ್ಲಾ ಧರ್ಮಗಳ, ಎಲ್ಲಾ ಕೋಮುಗಳ ಮಹಿಳೆಯರಿಗೂ ಅನ್ವಯವಾಗುತ್ತದೆ. ಹೀಗಿರುವಾಗ ಕಲ್ಲಡ್ಕ ಪ್ರಭಾಕರ ಭಟ್ಟರು ಯಾವ ಅಧಿಕಾರದಿಂದ ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಇಂತಹ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ? ಬ್ರಾಹ್ಮಣ ಕುಲದಲ್ಲಿ ಜನ್ಮ ತಾಳಿ, ವಯಸ್ಸಿನಲ್ಲಿ ಇಷ್ಟು ಹಿರಿಯರಾಗಿರುವ ಭಟ್ಟರ ಬಾಯಲ್ಲಿ ಇಂತಹ ಮಾತುಗಳು ಶೋಭೆ ತರುವಂತಹುದಲ್ಲ ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಹೇಳಿದ್ದಾರೆ.

ತಮಗೆ ಜನ್ಮ ನೀಡಿರುವ ತಾಯಿ, ಅವರ ಕೈಹಿಡಿದು ಅವರ ಸಂಸಾರವನ್ನು ಮುನ್ನಡೆಸಿದ ಅವರ ಸಹಧರ್ಮಿಣಿ ಅಥವಾ ಭಟ್ಟರ ಸಹೋದರಿಯರ ಬಗ್ಗೆ ಯಾರಾದರೂ ಇಂತಹ ಮಾತುಗಳನ್ನು ಹೇಳಿದ್ದಲ್ಲಿ ಭಟ್ಟರು ಸುಮ್ಮನಿರುತ್ತಿದ್ದರೇ? ಎಂದವರು ಪ್ರಶ್ನಿಸಿದ್ದಾರೆ.

ಭಟ್ಟರೇ, ಮನೆಯಲ್ಲೊಬ್ಬ ಹೆಂಡತಿಯಿದ್ದು ಹೊರಗೆ ಮತ್ತೊಬ್ಬ ಹೆಣ್ಣಿನೊಂದಿಗೆ ಸರಸವಾಡುವ ನಿಮ್ಮ ಪಕ್ಷದ ನಾಯಕರ ಅದೆಷ್ಟು ವೀಡಿಯೋಗಳು ಈ ದೇಶದ ಉದ್ದಗಲಕ್ಕೂ ಹರಿದಾಡಿದ್ದ ನಿದರ್ಶನಗಳಿಲ್ಲ? ಅದೆಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ನಿಮ್ಮ ಪಕ್ಷದವರೇ ಅಪರಾಧಿಗಳಾಗಿ ಬೆಳಕಿಗೆ ಬಂದಿಲ್ಲ? ಇನ್ನೊಬ್ಬರ ಚರಿತ್ರೆಯ ಕಡೆ ಬೆಟ್ಟು ಮಾಡಿ ತೋರಿಸುವ ಮೊದಲು ನಿಮ್ಮನ್ನು ನೀವು ಪರೀಕ್ಷೆಗೆ ಒಡ್ಡಿಕೊಳ್ಳಿ. ಎಲ್ಲಾ ಧರ್ಮಗಳಲ್ಲೂ ಪತಿಯನ್ನು ತೊರೆದು ಇನ್ನೊಬ್ಬ ಪುರುಷನೊಂದಿಗೆ ಬದುಕು ಸಾಗಿಸುತ್ತಿರುವ ಅನೇಕ ಮಹಿಳೆಯರು ಇರಬಹುದು. ಆದಕ್ಕೆ ಕಾರಣಗಳೂ ಬೇರೆ ಬೇರೆ ಇರಬಹುದು. ಹಾಗೆಂದು ಸಮಾಜದ ಎಲ್ಲಾ ಮಹಿಳೆಯರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವ ನಿಮ್ಮ ಪರಿ ಎಷ್ಟು ಸರಿ?ಇತರರು ಈ ತರಹದ ಹೇಳಿಕೆ ಕೊಟ್ಟಲ್ಲಿ ತಾವು ಅದನ್ನು ಖಂಡಿಸಿ ಅವರಿಗೆ ಬುದ್ಧಿ ಹೇಳಬೇಕಿತ್ತು. ಅದು ಬಿಟ್ಟು ಹಿರಿಯರಾದ ತಾವೇ ಇಂತಹ ಹೇಳಿಕೆ ಕೊಡುವುದೆಂದರೆ ಮಹಿಳೆಯರ ಬಗ್ಗೆ ತಮ್ಮ ಮನಸ್ಥಿತಿ ಯಾವ ಸ್ತರದಲ್ಲಿದೆ ಎನ್ನುವುದು ಗೊತ್ತಾಗುತ್ತದೆ. ಇಷ್ಟು ವಯಸ್ಸಾದರೂ ಇನ್ನೂ ತಮಗೆ ಬುದ್ಧಿ ಬಾರದಿರುವುದು ವಿಷಾದನೀಯ. ಮೋದಿಯವರನ್ನು ಹೊಗಳುವ ಭರದಲ್ಲಿ ಇಡೀ ಮಹಿಳಾ ಸಂಕುಲವನ್ನೇ ತಾವು ಅಪಮಾನಿಸಿದ್ದೀರಿ. ಇನ್ನಾದರೂ ತಮ್ಮನ್ನು ತಾವು ತಿದ್ದಿಕೊಂಡು ಮಹಿಳೆಯರಲ್ಲಿ ಕ್ಷಮೆ ಕೇಳುವ ದೊಡ್ಡತನ ತೋರಿಸಿ ,ಮಹಿಳೆಯರನ್ನು ಗೌರವ ಭಾವದಿಂದ ಕಾಣುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಅವರು ಹೇಳಿದ್ದಾರೆ.


Spread the love

Exit mobile version