ಭಯ ಬೇಡ, ಎಚ್ಚರ ಅಗತ್ಯ – ಉಡುಪಿಯ ಮೊದಲ ಕೋವಿಡ್ ಸೋಂಕಿನಿಂದ ಗುಣಮುಖರಾದ ರೋಗಿಯ ಸಂದೇಶ
ಉಡುಪಿ: ಉಡುಪಿಯಲ್ಲಿ ಕೊರೋನಾ ಸೋಂಕಿತನಾಗಿ ಆಸ್ಪತ್ರೆ ಗೆ ದಾಖಲಾಗಿದ್ದ ಪ್ರಥಮ ರೋಗಿ ಶನಿವಾರ ಡಿಸ್ಚಾರ್ಜ್ ಆಗಿದ್ದಾರೆ. 34 ವರ್ಷದ ಯುವಕ ಗುಣಮುಖನಾಗಿ ಮನೆ ಸೇರಿದ್ದಾರೆ. ಸದ್ಯ ಸಂಪೂರ್ಣ ಚೇತರಿಸಿಕೊಂಡಿರುವ ಈತ 14 ದಿನಗಳ ಹೋಂ ಕ್ವಾರಂಟೈನ್ ನಲ್ಲಿದ್ದಾನೆ. ತಾನು ಪಡೆದ ಚಿಕಿತ್ಸೆ ಹಾಗೂ ರೋಗಿಯ ಜೊತೆ ಸಮಾಜ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ವಾಯ್ಸ್ ಮೆಸೇಜ್ ಮೂಲಕ ಸಂದೇಶ ರವಾನಿಸಿದ್ದಾರೆ. ಈ ಆಡಿಯೋ ಸಾರಾಂಶ ಹೀಗಿದೆ
“ನಮಸ್ಕಾರ ನಾನು ನಿನ್ನೆ ದಿವಸ ಕರುನಾ ವೈರಸ್ನಿಂದ ಸಂಪೂರ್ಣ ಗುಣಮುಖನಾಗಿ ಕೆಎಂಸಿ ಮಣಿಪಾಲ ಮತ್ತು ಟಿಎಂಎ ಪೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುತ್ತೇನೆ. ದುಬೈಯಿಂದ ನಾನು ವಾಪಸ್ ಉಡುಪಿಗೆ ಬಂದ ನಂತರ ಸ್ವಯಂ ಪ್ರೇರಿತನಾಗಿ ನೇರವಾಗಿ ಆಸ್ಪತ್ರೆಗೆ ಬಂದು ದಾಖಲಾದೆ. ವೈರಸ್ ಬಗ್ಗೆ ಟೆಸ್ಟ್ ಮಾಡಿಸಿ ಪಾಸಿಟಿವ್ ಎಂದು ವರದಿ ಬಂದ ನಂತರ ಆತಂಕಕ್ಕೆ ಒಳಗಾಗದೆ 14 ದಿವಸ ಚಿಕಿತ್ಸೆಗೆ ಪಡೆದು ಗುಣಮುಖನಾಗಿರುತ್ತೇನೆ.
ಸಾರ್ವಜನಿಕರಲ್ಲಿ ವಿನಂತಿ ಏನೆಂದರೆ ಯಾರು ಈ ವೈರಸ್ ಬಗ್ಗೆ ಆತಂಕಕ್ಕೆ ಒಳಗಾಗಬೇಡಿ. ಆದರೆ ಎಚ್ಚರ ಅಗತ್ಯ. ವಿದೇಶದಿಂದ ಬಂದವರು ಅಥವಾ ಯಾವುದಾದರೂ ಸಭೆಯಲ್ಲಿ ಭಾಗವಹಿಸಿ ಬಂದವರು ಯಾರೇ ಇರಲಿ ತಾವಾಗಿಯೇ ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಿ. ಈ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಸಾರ್ವಜನಿಕರಲ್ಲಿ ಒಂದು ವಿನಂತಿ ಏನೆಂದರೆ ಕರೋನಾ ಪಾಸಿಟಿವ್ ಬಂದ ವ್ಯಕ್ತಿಗೆ ನಿಮ್ಮ ಕೈಯಲ್ಲಿ ಸಾಧ್ಯವಾದರೆ, ಧೈರ್ಯವನ್ನು ತುಂಬಿರಿ. ಅವರ ಧೈರ್ಯವನ್ನು ಕುಗ್ಗಿಸುವಂತಹ ಯಾವುದೇ ಕೆಲಸವನ್ನು ದಯವಿಟ್ಟು ಮಾಡಬೇಡಿ ಹಾಗೂ ನನಗೆ ಚಿಕಿತ್ಸೆ ನೀಡಿದ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಹಾಗೂ ಐಸಿಎಂಎಐ ಆಸ್ಪತ್ರೆಗೆ, ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಜಿಲ್ಲಾಧಿಕಾರಿಗಳಿಗೂ ಮತ್ತು ಪೊಲೀಸ್ ಅಧಿಕಾರಿಗಳಿಗೂ ನನ್ನ ಧನ್ಯವಾದಗಳು ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.