ಭರತ್ ಶೆಟ್ಟಿಯವರೇ ತಾಕತ್ತಿದ್ದರೆ ರಾಹುಲ್ ಮೈ ಮುಟ್ಟುವ ಪ್ರಯತ್ನ ಮಾಡಿ – ರಮೇಶ್ ಕಾಂಚನ್

Spread the love

ಭರತ್ ಶೆಟ್ಟಿಯವರೇ ತಾಕತ್ತಿದ್ದರೆ ರಾಹುಲ್ ಮೈ ಮುಟ್ಟುವ ಪ್ರಯತ್ನ ಮಾಡಿ – ರಮೇಶ್ ಕಾಂಚನ್

ಉಡುಪಿ: ಭರತ್ ಶೆಟ್ಟಿಯವರೇ ರಾಹುಲ್ ಗಾಂಧಿಯವರ ಕೆನ್ನೆಗೆ ಬಾರಿಸಲು ಪ್ರಯತ್ನಿಸುವಾಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೈಗೆ ಬಳೆ ತೊಟ್ಟುಕೊಂಡು ಕೂತಿರುವುದಿಲ್ಲ. ನಿಮಗೆ ದಮ್ಮು ತಾಕತ್ತು ಇದ್ದರೆ ಅವರ ಮೈ ಮುಟ್ಟುವ ಪ್ರಯತ್ನವನ್ನು ಒಮ್ಮೆ ಮಾಡಿ ನೋಡಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಸವಾಲು ಹಾಕಿದ್ದಾರೆ.

ಒರ್ವ ಜವಾಬ್ದಾರಿಯುತ ಶಾಸಕರಾಗಿ ಸಂವಿಧಾನದ ಆಶಯದಂತೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಇವರು ರಸ್ತೆಯಲ್ಲಿ ಅಡ್ಡಾಡುವ ಪುಡಿ ರೌಡಿಗಳಂತೆ ವರ್ತಿಸುತ್ತಿರುವುದು ಶಾಸಕ ಭರತ್ ಶೆಟ್ಟಿಯವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಮಾತನಾಡಿರುವ ವಿಷಯಗಳು ಹಿಂದೂ ಧರ್ಮಕ್ಕೆ ಅವಮಾನ ಆಗುವ ರೀತಿಯಲ್ಲಿ ಎಲ್ಲಿ ಕೂಡ ಮಾತನಾಡಿಲ್ಲ. ಹಿಂದೂ ಧರ್ಮದ ಹೆಸರನ್ನು ಹೇಳಿಕೊಂಡು ಬಿಜೆಪಿ ಪಕ್ಷ ಮಾಡುತ್ತಿರುವ ಆವಾಂತರ ಇಡೀ ಜಗತ್ತೇ ನೋಡಿದೆ. ಅದರ ಬಗ್ಗೆ ರಾಹುಲ್ ಗಾಂಧಿಯವರು ಬೆಳಕು ಚೆಲ್ಲುವ ಕೆಲಸವನ್ನು ಮಾಡಿದ್ದಾರೆ ಹೊರತು ಹಿಂದೂ ಧರ್ಮವನ್ನು ಅವಮಾನಿಸಿಲ್ಲ ಎನ್ನುವುದು ಸರ್ವರಿಗೂ ಗೊತ್ತಿರುವ ವಿಚಾರ.

ಉತ್ತರಾಮ್ನಾಯ ಜ್ಯೋತಿಷ್ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ರಾಹುಲ್ ಗಾಂಧಿ ಅವರ ಇಡೀ ಭಾಷಣವನ್ನು ಉಲ್ಲೇಖಿಸಿ ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಹಿಂದೂ ಧರ್ಮವು ಹಿಂಸೆಯನ್ನು ತಿರಸ್ಕರಿಸುತ್ತದೆ ಎಂದು ನಿಸ್ಸಂದಿಗ್ಧವಾಗಿ ಹೇಳಿದ್ದಾರೆ. ಆದರೆ ಹಿಂದೂ ಧರ್ಮದ ಹೆಸರಿನಲ್ಲಿ ಈ ಬಿಜೆಪಿಗರು ಹಿಂಸೆ, ಅಸತ್ಯ ಹಾಗೂ ಪ್ರಚೋದನೆಯನ್ನು ಮಾಡುತ್ತಾರೆಂದು ಹೇಳಿದ್ದಾರೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಪರವಾಗಿ ಮಾತನಾಡಿದ್ದನ್ನು ಇಡೀ ದೇಶವೇ ಗಮನಿಸಿದೆ.

ರಾಹುಲ್ ಗಾಂಧಿ ಜನರಿಂದ ಲಕ್ಷಾಂತರ ವೋಟಿನ ಆಧಾರದಲ್ಲಿ ಗೆದ್ದು ಬಂದಿದ್ದಾರೆ ಹೊರತು ಹಿಂಬಾಗಿಲಿನಿಂದ ಲೋಕಸಭೆಯನ್ನು ಪ್ರವೇಶ ಮಾಡಿದವರಲ್ಲ. ಪ್ರತಿಪಕ್ಷದ ನಾಯಕರಾಗಿ ತನ್ನ ಅಭಿಪ್ರಾಯವನ್ನು ಮಂಡಿಸುವ ಅಧಿಕಾರ ಅವರಿಗಿದೆ. ರಾಜ್ಯದಲ್ಲಿ ಅಧಿಕಾರ ಇಲ್ಲದೆ ಚಡಪಡಿಸುತ್ತಿರುವ ಬಿಜೆಪಿಯ ನಾಯಕರು ತಮ್ಮ ಬಾಯಿ ಚಪಲಕ್ಕೆ ಮಾತನಾಡುವುದು ಹೊಸತೇನಲ್ಲ. ಕರಾವಳಿಯ ಶಾಸಕರ ಬಗ್ಗೆ ಒಂದು ಕಾಲದಲ್ಲಿ ದೇಶವೇ ಹೆಮ್ಮೆಪಡುತ್ತಿತ್ತು ಆದರೆ ಇತ್ತೀಚೆಗೆ ಆಯ್ಕೆಯಾದ ಬಿಜೆಪಿಯ ಶಾಸಕರು ಬಾಯಿಗೆ ಬಂದಂತೆ ಮಾತನಾಡಿ ಕರಾವಳಿಯ ಉತ್ತಮ ಸಂಸ್ಕೃತಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ನಾಚೀಕೆಗೇಡು. ಒಬ್ಬ ಶಾಸಕ ಶಾಲೆಯ ಎದುರು ಹೋಗಿ ಬೊಬ್ಬೆ ಹಾಕಿದರೆ ಇನ್ನೊಬ್ಬ ಶಾಸಕ ಪೊಲೀಸ್ ಠಾಣೆಯಲ್ಲಿ ಹೋಗಿ ಗಲಾಟೆ ಎಬ್ಬಿಸಿ ಹೈಕೋರ್ಟ್ ಎದುರು ಛೀಮಾರಿ ಹಾಕಿಸಿಕೊಂಡಿದ್ದಾರೆ. ಅವರ ಸಾಲಿಗೆ ಇನ್ನೊಬ್ಬರಾಗಿ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಯ ಬಿಡುವ ಮೂಲಕ ಭರತ್ ಶೆಟ್ಟಿಯವರು ಸೇರ್ಪಡೆಗೊಂಡಿದ್ದಾರೆ.

ಜನರು ಇವರುಗಳ ಕಪಿಚೇಷ್ಠೆಗಳನ್ನು ನೋಡಿಕೊಂಡೇ ಬಂದಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡುತ್ತಾರೆ. ಕಾಂಗ್ರೆಸ್ ಪಕ್ಷದ ಪರಮೋಚ್ಛ ನಾಯಕ ರಾಹುಲ್ ಗಾಂಧಿಯವರ ಕುರಿತು ಶಾಸಕ ಭರತ್ ಶೆಟ್ಟಿಯವರು ಆಡಿರುವ ಮಾತಿಗೆ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ವಿರುದ್ದ ಉಗ್ರವಾದ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
1 Comment
Inline Feedbacks
View all comments
Sarayu
4 months ago

MLA’s should focus on developmental works of their constitution instead of using abusive language and gathering the pppl and issue derogatory statements. Voters are suffering due to various problems. Instead of solving this, engaging in spewing venom. We hindus don’t want division. We want to construct our society including all the castes unitedly. What you do is the black stain for our hindu religion.