ಭವಿಷ್ಯದ ಭಾರತಕ್ಕೆ ಭದ್ರ ಅಡಿಪಾಯ ಹಾಕಿದ ಬಜೆಟ್ : ಶ್ರೀನಿಧಿ ಹೆಗ್ಡೆ
ಉಡುಪಿ: ರಾಷ್ಟ್ರದ ಮದ್ಯಮ ವರ್ಗ, ಬಡವರು ಗ್ರಾಮೀಣ ಪ್ರದೇಶದ ಜನರ ರೈತರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮುಲಕ ಸಮಾಜದ ಪ್ರತೀ ಕ್ಷೇತ್ರದ ಜನರಿಗೆ ಶಕ್ತಿ ನೀಡುವ ಬಜೆಟ್ ಇದಾಗಿದೆ. ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ, ಮೂಲ ಸೌಕರ್ಯ ಹೀಗೆ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಭವಿಷ್ಯದ ಭಾರತಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಈ ಮೂಲಕ ಮೋದಿ ಸರ್ಕಾರ ಭಾರತದ ಆರ್ಥಿಕ ವೇಗಕ್ಕೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕೆ 3 ಲಕ್ಷ ಕೋಟಿ ಮೀಸಲಿಡುವ ಮೂಲಕ ಹೆಣ್ಣು ಮಕ್ಕಳ ಯೋಜನೆಗೆ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವಲ್ಲಿ ಸರ್ಕಾರದ ಈ ನಿರ್ಧಾರ ಮಹತ್ವದ ಪಾತ್ರ ವಹಿಸಿದೆ. ಸ್ತ್ರೀಯರು ಖರೀದಿಸುವ ಆಸ್ತಿ ಮೇಲೆ ಸುಂಕ ಇಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕೇಂದ್ರೀಕರಿಸಿದೆ.
ರೈಲ್ವೆಗೆ ದಾಖಲೆಯ 2.25 ಲಕ್ಷ ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ರೈಲ್ವೆ ಇಲಾಖೆಯ ಕ್ರಾಂತಿಕಾರಿ ಬದಲಾವಣೆ ಯೋಜನೆಗೆ ಮತ್ತಷ್ಟೂ ವೇಗ ದೊರಕಲಿದೆ. ರಾಜ್ಯದ ರೈಲ್ವೇ ಯೋಜನೆಗಳಿಗೆ 7,500ಕೋಟಿ ಅನುದಾನವನ್ನ ಒದಗಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಸಂಶೋಧನೆ, ತಂತ್ರಜ್ಞಾನ, ಖಾಸಗಿ ಸಹಭಾಗಿತ್ವದ ಮೂಲಕ ಆಧುನಿಕ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ 1.52 ಲಕ್ಷ ಕೋಟಿ ಘೋಷಣೆ ಮಾಡಿದೆ.
ತೆರಿಗೆ ಸ್ಲ್ಯಾಬ್ ಗಳ ಬದಲಾವಣೆ ಅಗತ್ಯ ಔಷಧಿಗಳ ಬೆಲೆ ಇಳಿಕೆ, ಯುವಕರಿಗೆ ಕೌಶಲ್ಯ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸುವ ಮೂಲಕ ಮುಂದಿನ 5 ವರ್ಷ ಅವಧಿಗೆ ಭಾರತಕ್ಕೆ ದಿಕ್ಸೂಚಿ ನೀಡಬಲ್ಲ ಹಾಗೂ 2047 ಕ್ಕೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಲು ಅಡಿಪಾಯ ಹಾಕಬಲ್ಲ ಮುಂಗಡ ಪತ್ರ ಇದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.