Home Mangalorean News Kannada News ಭವಿಷ್ಯದ ಸವಾಲು, ಅವಕಾಶಗಳಿಗೆ ಸಿದ್ಧರಾಗಿ: ಉಮೇಶ್ ರೇವಣ್ಕರ್

ಭವಿಷ್ಯದ ಸವಾಲು, ಅವಕಾಶಗಳಿಗೆ ಸಿದ್ಧರಾಗಿ: ಉಮೇಶ್ ರೇವಣ್ಕರ್

Spread the love

ಭವಿಷ್ಯದ ಸವಾಲು, ಅವಕಾಶಗಳಿಗೆ ಸಿದ್ಧರಾಗಿ: ಉಮೇಶ್ ರೇವಣ್ಕರ್

ನಿಮ್ಮ ಭವಿಷ್ಯ ಸವಾಲುಗಳು ಹಾಗೂ ಅವಕಾಶಗಳಿಂದ ಕೂಡಿದೆ. ನಿಮ್ಮ ಬದುಕಿನ ಹೊಸ ಅಧ್ಯಾಯದ ದಾರಿಯನ್ನು ನೀವೇ ನಿರ್ಧರಿಸುವ ಸ್ವಾತಂತ್ರ್ಯವೂ ನಿಮ್ಮ ಮುಂದಿದೆ. ಧೈರ್ಯ, ಕುತೂಹಲ ಹಾಗೂ ಕಠಿಣ ಪರಿಶ್ರಮದ ಸಮರ್ಪಣಾ ಮನೋಭಾವದೊಂದಿಗಿಈ ಮಾರ್ಗವನ್ನು ನೀವು ಆಯ್ಕೆ ಮಾಡಿಕೊಳ್ಳಿ ಎಂದು ಶ್ರೀರಾಮ್ ಫೈನಾನ್ಸ್ ಕಂಪೆನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉಮೇಶ ಗೋವಿಂದ ರೇವಣ್ಕರ್ ಹೇಳಿದ್ದಾರೆ.

ಕಾರ್ಕಳ ತಾಲೂಕು ನಿಟ್ಟೆಯ ಎನ್ಎಂಎಎಂಐಟಿಯ ಸದಾನಂದ ಸಭಾಂಗಣದಲ್ಲಿ  ನಡೆದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ 14ನೇ ಹಾಗೂ ನಿಟ್ಟೆ ಆಫ್ ಕ್ಯಾಂಪಸ್ನ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಘಟಕೋತ್ಸವ ಭಾಷಣ ಮಾಡುತಿದ್ದರು.

ಸ್ನಾತಕೋತ್ತರ ಪದವಿಯೊಂದಿಗೆ ಹೊರಬಂದಿರುವ ನೀವು ಬದಲಾವಣೆಗೆ ಹಿಂಜರಿಯಬೇಡಿ, ಸವಾಲುಗಳನ್ನು ಅಪ್ಪಿಕೊಳ್ಳಿ ಹಾಗೂ ಜ್ಞಾನಗಳಿಕೆಯನ್ನು ನಿಲ್ಲಿಸಬೇಡಿ. ಶಿಕ್ಷಣವು ವ್ಯಕ್ತಿಯ ಜ್ಞಾನ, ಕೌಶಲ್ಯಗಳನ್ನು ಸುಧಾರಿಸುತ್ತದೆ ಹಾಗೂ ವ್ಯಕ್ತಿತ್ವ ಮತ್ತು ಮನೋಭಾವವನ್ನು ಅಭಿವೃದ್ಧಿಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಶಿಕ್ಷಣ ಸಮಾಜದ ಅಡಿಪಾಯ ಮತ್ತು ಉತ್ತಮ ನಾಳೆಗೆ ನಾಂದಿ. ಎಲ್ಲವೂ ನೀವು ಅಂದುಕೊಂಡದ್ದು ನಡೆದೇ ನಡೆಯುತ್ತದೆ ಎನ್ನಲಾಗದು. ಅಂದುಕೊಂಡ ಕಾರ್ಯ ನಡೆಯದಿದ್ದರೆ ಧೃತಿಗೆಡದೆ ಮುನ್ನಡೆಯಬೇಕು ಎಂದು ಅವರು ಇಂದು ಸ್ನಾತಕೋತ್ತರ ಪದವಿ ಪಡೆದ 311 ಮಂದಿ ವಿದ್ಯಾರ್ಥಿಗಳನ್ನುದ್ದೇಶಿಸಿ ನುಡಿದರು.

ಶೇ.16ಮಂದಿ ಸ್ನಾತಕೋತ್ತರ ಪದವೀಧರರು: ನಿಟ್ಟೆ ವಿವಿಯ ಪ್ರೊ ಚಾನ್ಸಲರ್ ಪ್ರೊ.(ಡಾ.) ಎಂ. ಶಾಂತಾರಾಮ್ ಶೆಟ್ಟಿ ಮಾತನಾಡಿ, ಇಂದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.70ರಷ್ಟು ಮಂದಿ ಪದವೀಧರರು, ಶೇ.17ರಷ್ಟು ಮಂದಿ ಸ್ನಾತಕೋತ್ತರ ಪದವೀಧರರು ಹಾಗೂ ಕೇವಲ ಶೇ.0.5 ಮಂದಿ ಡಾಕ್ಟರೇಟ್ ಪಡೆದವರಿದ್ದಾರೆ. ದೇಶದಲ್ಲಿ ಪ್ರತಿವರ್ಷ ಒಂದು ಮಿಲಿಯ ಇಂಜಿನಿಯರ್ಗಳು ಹೊರಬಂದರೆ, ಈಗಾಗಲೇ ಐದು ಮಿಲಿಯ ನಿರುದ್ಯೋಗಿ ಇಂಜಿನಿಯರ್ಗಳು ದೇಶದಲ್ಲಿದ್ದಾರೆ ಎಂದರು.

ಶಿಕ್ಷಣ ಕತ್ತಲೆಯಲ್ಲಿ ಬೆಳಕಿನ ಕಿರಣವಿದ್ದಂತೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಗುಣ ನಡತೆಯನ್ನು ನೀಡುವುದು ಶಿಕ್ಷಣ ಸಂಸ್ಥೆಯ ಆದ್ಯ ಕರ್ತವ್ಯ. ಪೋಷಕರು, ವಿದ್ಯೆ ಕಲಿಸಿದ ಗುರುಗಳು, ವಿದ್ಯಾಲಯ ಹಾಗೂ ನಮ್ಮ ಜನ್ಮಭೂಮಿ ನಮ್ಮ ಏಳಿಗೆಗೆ ಕಾರಣ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಡೀಮ್ಡ್ ವಿವಿಯ ಕುಲಾಧಿಪತಿ ಎನ್. ವಿನಯ ಹೆಗ್ಡೆ, ನಿಟ್ಟೆ ವಿವಿಯ ನಿಟ್ಟೆ, ಮಂಗಳೂರು ಹಾಗೂ ಬೆಂಗಳೂರಿನಲ್ಲಿರುವ ಮೂರು ಕ್ಯಾಂಪಸ್ಗಳಲ್ಲಿ ಒಟ್ಟು 14,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತಿದ್ದು, ನಿಟ್ಟೆ ವಿದ್ಯಾಸಂಸ್ಥೆಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರನ್ನು ಗಳಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ ಚಾನ್ಸಲರ್ (ಆಡಳಿತ) ವಿಶಾಲ್ ಹೆಗ್ಡೆ, ಫೈನಾನ್ಸ್ ಪ್ಲಾನಿಂಗ್ ವಿಭಾಗದ ನಿರ್ದೇಶಕ ರಾಜೇಂದ್ರ ಎಂ, ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೆರಾಯ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಬಿ ಶೆಟ್ಟಿ, ನಿಟ್ಟೆ ಆಫ್ ಕ್ಯಾಂಪಸ್ನ ವಿವಿಧ ಕಾಲೇಜುಗಳ ಮುಖ್ಯಸ್ಥರು, ಎಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.

ನಿಟ್ಟೆ ವಿವಿಯ ಕುಲಪತಿ ಡಾ. ಎಂ.ಎಸ್.ಮೂಡಿತ್ತಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುಧೀರ್ರಾಜ್ ಹಾಗೂ ಡಾ.ಹರ್ಷಿತಾ ಜತ್ತನ್ನ ಕಾರ್ಯಕ್ರಮ ನಿರೂಪಿಸಿದರು.

ಇಂದು 29 ಮಂದಿಗೆ ಎಂಟೆಕ್, 120 ಮಂದಿಗೆ ಎಂಸಿಎ ಹಾಗೂ 162 ಮಂದಿಗೆ ಎಂಬಿಎ ಸೇರಿದಂತೆ ಒಟ್ಟು 311 ಮಂದಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಎಂಟೆಕ್ನಲ್ಲಿ ಮೊಂತೆರೊ ಪಮೇಲಾ ಸ್ಟಾನ್ಸಿ ಎಡ್ವರ್ಡ್, ಎಂಸಿಎಯಲ್ಲಿ ವಿನಾಯಕ ಕಾಮತ್ ಹಾಗೂ ಎಂಬಿಎಯಲ್ಲಿ ನೇಹಾ ದೇವಾಡಿಗ ಮೊದಲ ರ್ಯಾಂಕ್ನೊಂದಿಗೆ ಚಿನ್ನದ ಪದಕಗಳನ್ನು ಸ್ವೀಕರಿಸಿದರು.


Spread the love

Exit mobile version