ಭಾನುವಾರ ಜನತಾ ಕರ್ಫ್ಯೂ: ಮೆಟ್ರೋ, ಕೆಎಸ್ ಆರ್ ಟಿಸಿ ಬಂದ್, ಬೆಂಗಳೂರು ಸ್ತಬ್ಧ
ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶಾದ್ಯಂದ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಅಂದು ಬೆಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ.
ಜನತಾ ಕರ್ಫ್ಯೂಗೆ ಈಗಾಗಲೇ ಹಲವು ವ್ಯಾಪಾರಿಗಳು ಬೆಂಬಲ ನೀಡಿದ್ದು, ನಮ್ಮ ಮೆಟ್ರೋ ಹಾಗೂ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸಹ ಸ್ಥಗಿತಗೊಳ್ಳಲಿದೆ.
ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಮೆಟ್ರೋ ಸೇವೆ ಇರುವುದಿಲ್ಲ ಎಂದು ಬಿಎಂಆರ್ ಸಿಎಲ್ ವಕ್ತಾರ ಟಿಎಲ್ ರವಿ ಪ್ರಕಾಶ್ ಅವರು ತಿಳಿಸಿದ್ದಾರೆ.
ಇನ್ನು ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು, ಮಾರ್ಚ್ 22ರಂದು ಬಸ್ ಸೇವೆ ಇರುವುದಿಲ್ಲ. ಅಗತ್ಯ ಇದ್ದರೆ ಮಾತ್ರ ಒಂದೇರಡು ಬಸ್ ಗಳು ಸಂಚಾರ ನಡೆಸಲಿವೆ ಎಂದು ತಿಳಿಸಿದ್ದಾರೆ.
ಓಲಾ ಮತ್ತು ಊಬರ್ ಸಂಸ್ಥೆಗಳೂ ಕೂಡ ಒಂದು ದಿನದ ಮಟ್ಟಿಗೆ ಕ್ಯಾಬ್ ಸೇವೆ ನಿಲ್ಲಿಸಲಿವೆ ಎಂದು ಓಲಾ ಊಬರ್ ಸಂಘಟನೆಗಳ ಅಧ್ಯಕ್ಷ ತನ್ವಿರ್ ಪಾಷಾ ತಿಳಿಸಿದ್ದಾರೆ.
ಸ್ವಯಂ ಜನತಾ ಕರ್ಫ್ಯೂಗೆ ಹೋಟೆಲ್ಗಳ ಸಂಘ ಬೆಂಬಲ ನೀಡಿದೆ. ಭಾನುವಾರ ಬಹುತೇಕ ಎಲ್ಲಾ ಹೋಟೆಲ್, ಸ್ವೀಟ್ ಸ್ಟಾಲ್, ರೆಸ್ಟೋರೆಂಟ್, ಬೇಕರಿ, ಕೆಟರಿಂಗ್ಗಳು ಬಾಗಿಲು ಬಂದ್ ಮಾಡಲಿವೆ.