ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನವಾದಲ್ಲಿ ಪರಿಪೂರ್ಣ ಅಭಿವೃದ್ದಿ: ಸಂಸದ ಕೋಟ ವಿಶ್ವಾಸ
ಕುಂದಾಪುರ: ಬೇಡಿಕೆಯಂತೆ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗುವ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಗಳಾಗಿದ್ದು, ಇದಕ್ಕೆ ಕರ್ನಾಟಕ ಸರ್ಕಾರ ಭಾಗಶಃ ಒಪ್ಪಿಗೆ ಕೊಟ್ಟಿದೆ. ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನವಾದಲ್ಲಿ ಪರಿಪೂರ್ಣ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಕುಂದಾಪುರದ ಮೂಡ್ಲಕಟ್ಟೆ ರೈಲ್ವೇ ನಿಲ್ದಾಣದಲ್ಲಿ ಮೊದಲ ಬಾರಿಗೆ ನಿಲುಗಡೆಗೊಂಡ ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್ಪ್ರೆಸ್ ಮತ್ತು ಎರ್ನಾಕುಲಂ ನಿಜಾಮುದ್ಧಿನ್ ಎಕ್ಸ್‌ಪ್ರೆಸ್ ರೈಲುಗಳನ್ನು ಸ್ವಾಗತಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ವಿಲೀನಗೊಳಿಸುವ ಕುರಿತಂತೆ ಮುಂದಿನ ದಿನಗಳಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೇರಿದಂತೆ ಕರಾವಳಿ ಶಾಸಕರ ಜೊತೆಗೂಡಿ ಮುಖ್ಯಮಂತ್ರಿ ಹಾಗೂ ರಾಜ್ಯ ಸಚಿವ ಎಂ.ಬಿ ಪಾಟೀಲರನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಅಂದುಕೊಂಡಂತೆ ಆದಲ್ಲಿ ಕೊಂಕಣ ರೈಲ್ವೇಯನ್ನು ಅಭಿವೃದ್ದಿಗೊಳಿಸಲು, ಜೋಡಿ ಹಳಿಗಳಾಗಲು ಅನುಕೂಲಗಳಾಗುತ್ತವೆ. ಮಂಗಳೂರು-ಗೋವಾಕ್ಕೆ ಕಾರ್ಯಾಚರಿಸುತ್ತಿರುವ ವಂದೇ ಭಾರತ್ ರೈಲು ಪ್ರಯಾಣಿಕರ ಕೊರತೆಯಿಂದಾಗಿ ನಿಲುಗಡೆಯಾಗಬೇಕೆನ್ನುವ ಪ್ರಸ್ತಾಪಗಳಿದ್ದು, ರೈಲ್ವೇ ಹಿತರಕ್ಷಣಾ ಸಮಿತಿ ಮತ್ತು ನಾವೆಲ್ಲರೂ ಜೊತೆಯಾಗಿ ಕೇಂದ್ರ ಸಚಿವರ ಗಮನ ಸೆಳೆದು ಈ ರೈಲನ್ನು ನಿಲ್ಲಿಸದೇ ಮುಂಬೈಗೆ ವಿಸ್ತರಿಸುವ ಬೇಡಿಕೆ ಸಲ್ಲಿಸಿದ್ದೇವೆ. ಮಂಗಳೂರನ್ನು ರೈಲ್ವೇ ವೃತ್ತವಾಗಿ ಪರಿಗಣಿಸಬೇಕೆನ್ನುವುದು ಬಹಳ ದಿನಗಳ ಬೇಡಿಕೆ. ಈಗಾಗಲೇ ನಮ್ಮ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಪ್ರಥಮ ಹಂತವಾಗಿ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಕುಂದಾಪುರದಲ್ಲಿ ನಿಲುಗಡೆಯಾಗಿರುವುದು ಸಂತಸದ ವಿಚಾರ ಎಂದ ಅವರು, ನಿಜಾಮುದ್ದಿನ್ ಎಕ್ಸ್ಪ್ರೆಸ್ ಕುಂದಾಪುರದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಟ್ಟ ರಾಜ್ಯ ರೈಲ್ವೇ ಸಚಿವರಾದ ಸೋಮಣ್ಣ ಮತ್ತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಮಾತ್ರ ನಿಲುಗಡೆಗೆ ಅವಕಾಶವಿದ್ದ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಸಂಸದರ ವಿಶೇಷ ಪ್ರಯತ್ನದಿಂದಾಗಿ ಕುಂದಾಪುರದಲ್ಲಿ ನಿಲುಗಡೆಗೆ ಅನುಮತಿ ದೊರೆತಿರುವುದು ಸಂತಸದ ಸಂಗತಿ. ಇದರಿಂದ ಈ ಭಾಗದ ಯಾತ್ರಿಕರಿಗೆ ತುಂಬಾ ಅನುಕೂಲವಾಗಲಿದೆ. ಕೊಂಕಣ ರೈಲ್ವೇ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸರ್ಕಾರದ ಮುಂದಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಒಂದೇ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಸಬೇಕು. ಇಲ್ಲವಾದಲ್ಲಿ ಕೊಂಕಣ ರೈಲ್ವೆ ನಿಲ್ದಾಣ ಹಾಗೂ ಅದರ ಹಳಿಗಳನ್ನು ಅಭಿವೃದ್ದಿಪಡಿಸಲು ಸರ್ಕಾರವೇ ಅನುದಾನ ಕೊಡಬೇಕು ಎಂದು ಎರಡನೇ ಅಧಿವೇಶನದಲ್ಲಿಯೂ ಸರ್ಕಾರಕ್ಕೆ ಪ್ರಸ್ತಾಪ ಮಾಡಿದ್ದೇವೆ ಎಂದರು.
ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ಈಗಾಗಲೇ ಹೋರಾಟದ ಮೂಲಕ ಹಲವಾರು ರೈಲುಗಳ ನಿಲುಗಡೆಯನ್ನು ಪಡೆಯಲು ಸಾಧ್ಯವಾಗಿದೆ. ನಿಜಾಮುದ್ದಿನ್ ರೈಲು ಮುಂಬೈ ಹಾಗೂ ತಿರುವನಂತಪುರ ತೆರಳಲು ಬಹಳ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಸಾಕಷ್ಟು ವರ್ಷಗಳಿಂದ ಇದರ ನಿಲುಗಡೆಗೆ ಪ್ರಯತ್ನಿಸುತ್ತಲೇ ಬಂದಿದ್ದೇವೆ. ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಸಂಸದರಾಗಿ ಮೊದಲ ಬಾರಿಗೆ ಕುಂದಾಪುರ ರೈಲ್ವೇ ನಿಲ್ದಾಣಕ್ಕೆ ಬಂದಾಗ ಅವರಲ್ಲಿ ಮನವಿ ಮಾಡಿಕೊಂಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ ಸಂಸದರು ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದು, ಇದೀಗ ರೈಲು ನಿಲುಗಡೆಗೆ ಅವಕಾಶ ಸಿಕ್ಕಿದೆ ಎಂದರು.
ಕೊಕಣ ರೈಲ್ವೆಯ ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕರಾದ ದಿಲೀಪ್ ಡಿ ಭಟ್, ವಾಣಿಜಜ್ಯ ಮೇಲ್ವಿಚಾರಕ ಎಸ್ ಕೆ ಭಟ್, ಸಾಋವಜಮಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ರೈಲ್ವೇ ಹಿತರಕ್ಷಣಾ ಸಮಿತಿಯ ಪ್ರವೀಣ್ ನಾಯ್ಕ್, ವಿವೇಕ್ ನಾಯ್ಕ್, ಪದ್ಮನಾಭ್ ಶೆಣೈ, ರಾಜು ಮೊಗವೀರ, ನಾಗರಾಜ್ ಆಚಾರ್, ಉದಯ್ ಭಂಡಾರ್ಕಾರ್, ಧರ್ಮಪ್ರಕಾಶ್, ಪ್ರಮುಖರಾದ ಶಿವರಾಮ್ ಶೆಟ್ಟಿ ರೆಡ್ ಕ್ರಾಸ್, ಹೆರಾಲ್ಡ್ ಡಿಸೋಜಾ, ಹ್ಯಾರಿ ಡಿಮೆಲ್ಲೋ, ಶ್ರೀಶನ್ ನಾಯರ್, ವಿಲ್ಸನ್ ಅಲ್ಮೇಡಾ, ಪ್ರಥ್ವಿ ಕುಂದರ್, ಮನೋಜ್ ನಾಯರ್, ಸುರೇಶ್ ಶೆಟ್ಟಿ ಗೋಪಾಡಿ, ರಾಜೇಶ್ ಕಾವೇರಿ, ಸುಧೀರ್ ಕೆ.ಎಸ್, ಸೌರಭಿ ಪೈ ಸರಸ್ವತಿ ಜಿ ಪುತ್ರನ್, ಆಶಾ ಶೆಟ್ಟಿ, ಮತ್ತಿತರರು ಇದ್ದರು.