Home Mangalorean News Kannada News ಭಾರತೀಯ ವೈದ್ಯರುಗಳ ವೇದಿಕೆ, ಕುವೈತ್ ಅಧ್ಯಕ್ಷರಾಗಿ ಡಾ. ಸುರೇಂದ್ರ ನಾಯಕ್ ಕಾಪಾಡಿ ಆಯ್ಕೆ

ಭಾರತೀಯ ವೈದ್ಯರುಗಳ ವೇದಿಕೆ, ಕುವೈತ್ ಅಧ್ಯಕ್ಷರಾಗಿ ಡಾ. ಸುರೇಂದ್ರ ನಾಯಕ್ ಕಾಪಾಡಿ ಆಯ್ಕೆ

Spread the love

ಭಾರತೀಯ ವೈದ್ಯರುಗಳ ವೇದಿಕೆ, ಕುವೈತ್ ಅಧ್ಯಕ್ಷರಾಗಿ ಡಾ. ಸುರೇಂದ್ರ ನಾಯಕ್ ಕಾಪಾಡಿ ಆಯ್ಕೆ

ಕುವೈತ್: ಇಂಡಿಯನ್ ಡಾಕ್ಟರ್ಸ್ ಫೋರಮ್ (ಭಾರತೀಯ ವೈದ್ಯರುಗಳ ವೇದಿಕೆ) ಕುವೈತ್ ಇದರ ಅಧ್ಯಕ್ಷರಾಗಿ, ಉಡುಪಿ ಜಿಲ್ಲೆಯ, ಪೆರ್ಡೂರು-ಹರಿಖಂಡಿಗೆ ಮೂಲದ ಡಾ. ಸುರೇಂದ್ರ ನಾಯಕ್ ಕಾಪಾಡಿ ಇವರು 2018-2020 ಸಾಲಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾ. 27-04-2018ರ ಶುಕ್ರವಾರದಂದು ರೀಜೆನ್ಸಿ ಹೋಟೆಲ್ ಕುವೈತ್ ಇಲ್ಲಿ ನೆಡೆದ ವಾರ್ಷಿಕ ಮಹಾಸಭೆಯಲ್ಲಿ, ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು.

ಕುವೈತ್ ಐ.ಡಿ.ಎಫ್., ಕುವೈತ್‍ನಲ್ಲಿ 2004ರಿಂದ ಪ್ರಾರಂಭಗೊಂಡು ಕಾರ್ಯಾಚರಿಸುತ್ತಿದ್ದು, ಸಮಾಜಸೇವೆಯಲ್ಲಿ ಕೂಡಾ ಮುಂಚೂಣಿಯಲ್ಲಿದೆ. ಸಂಘಟನೆಯಲ್ಲಿ ಸದಸ್ಯರಾಗಿ ಸುಮಾರು 500ಕ್ಕೂ ಹೆಚ್ಚು ಭಾರತೀಯ ಮೂಲದ ವೈದ್ಯರುಗಳು ವೈದ್ಯಕೀಯ ಸೇವೆಯ ಜೊತೆಜೊತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2014 ರಲ್ಲಿ ಭಾರತ ಘನ ಸರಕಾರದಿಂದ ’ಪ್ರವಾಸಿ ಭಾರತೀಯ ಸಮ್ಮಾನ್’ ದಿಂದ ಪುರಸ್ಕೃತವಾದ ಕುವೈತ್ ನ ಎಕೈಕ ಸಂಘಟನೆ ಎಂಬ ಹೆಮ್ಮೆ ಪಡೆದಿದೆ ಇಂಡಿಯನ್ ಡಾಕ್ಟರ್ಸ್ ಫೋರಮ್, ಕುವೈತ್.

ಸಂಘವು ಪ್ರತಿ ತಿಂಗಳಲ್ಲಿ 2 ರಿಂದ 3 ಉಚಿತ ವೈದ್ಯಕೀಯ ಶಿಬಿರಗಳು, ಅಂತರ್ ಶಾಲಾ ಆರೋಗ್ಯ ರಸಪ್ರಶ್ನೆ, ಆರೋಗ್ಯ ಜಾಗೃತಿಯ ಬಗ್ಗೆ ಶಿಬಿರ, ಭಾಷಣ, ಕಾರ್ಯಾಗಾರಗಳನ್ನು ಆಯೋಜಿಸುವುದು, ಆರೋಗ್ಯ ಮಾರ್ಗದರ್ಶಿ ಪುಸ್ತಕ, ಕರಪತ್ರ, ಕೈಪಿಡಿಗಳನ್ನು ಮುದ್ರಿಸಿ ಹಂಚುವುದರ ಮೂಲಕ ಮತ್ತು ಭಾರತದಿಂದ ಖ್ಯಾತ ಹಾಗೂ ತಜ್ಙ ವೈದ್ಯರುಗಳನ್ನು ಆಹ್ವಾನಿಸಿ ಉಪನ್ಯಾಸಗಳನ್ನು ನೀಡುವುದರ ಮೂಲಕ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಯನ್ನು ನೆಡೆಸುತ್ತಿದೆ.

ಐ.ಡಿ.ಎಫ್. ಕುವೈತ್‍ನ ಪ್ರಸ್ತುತ ಅಧ್ಯಕ್ಷರಾದ ಡಾ. ನಾಯಕ್ ರವರು ತಮ್ಮ ವೈದ್ಯಕೀಯ ಪದವಿ ಎಂ.ಬಿ.ಬಿ.ಎಸ್. ನ್ನು ಕರ್ನಾಟಕ ವೈದ್ಯಕೀಯ ಸಂಸ್ಥೆ (KIMS) ಮತ್ತು ಸ್ನಾತಕೋತ್ತರ ಪದವಿ (ಎಂ.ಡಿ.)ಯನ್ನು ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ, ಮಂಗಳೂರಿನಿಂದ ಪಡೆದು, ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 16 ವರ್ಷಗಳ ಸೇವೆ ಸಲ್ಲಿಸಿ, 2002 ರಿಂದ ಪ್ರಾರಂಭಗೊಂಡು ಕಳೆದ 16 ವರ್ಷಗಳಿಂದ ಕುವೈತ್‍ನ Ministry Of Health (M.O.H.) ಸಭಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಇಂಡಿಯನ್ ಡಾಕ್ಟರ್ಸ್ ಫೋರಮ್ ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಡಾ. ನಾಯಕ್ ರವರು ಈ ಹಿಂದೆ ಕುವೈತ್ ಕನ್ನಡ ಕೂಟ ಹಾಗೂ ಜಿ. ಎಸ್. ಬಿ. ಸಭಾ ಕುವೈತ್ ನಲ್ಲೂ ಕೂಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಸೇವಾ ಮನೋಭಾವ, ಸದಾ ಹಸನ್ಮುಖಿ, ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದಾರೆ. ಸಂಗೀತ, ಭಜನೆ, ಪ್ರಹಸನ, ನಾಟಕ ಕಾರ್ಯಕ್ರಮಗಳಲ್ಲೂ ಆಸಕ್ತಿಯಿಂದ ಭಾಗವಹಿಸುತ್ತಿರುತ್ತಾರೆ. ಮುದ್ದಿನ ಮಡದಿ ಸುಗುಣಾ, ಮಗಳು ಸುರಕ್ಷಾ, ವೈದ್ಯಕೀಯ ಸ್ನಾತಕೋತ್ತರ ಪದವಿ (M.S. Ortho) ವಿದ್ಯಾಭ್ಯಾಸ ಮಾಡುತ್ತಿರುವ ಮಗ ಡಾ. ಸಚೀಂದ್ರ ನಾಯಕ್ ರವರ ಜೊತೆಗೆ ಸುಖ ಸಂಸಾರ ನೆಡೆಸುತ್ತಿದ್ದಾರೆ.

ಡಾ. ನಾಯಕ್ ರವರು ಭಾರತೀಯ ವೈದ್ಯರುಗಳ ವೇದಿಕೆ ಕುವೈತ್ (IDFKUWAIT) ಇದರ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಇಲ್ಲಿನ ದಕ್ಷಿಣಕನ್ನಡ, ಕರ್ನಾಟಕ ಮೂಲದ ಸಂಘ-ಸಂಸ್ಥೆಗಳು, ಪದಾಧಿಕಾರಿಗಳು, ಭಾರತೀಯ ಮೂಲದ ಹಲವು ಸಂಘ-ಸಂಸ್ಥೆಗಳು, ಪದಾಧಿಕಾರಿಗಳು ತಮ್ಮ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಿದ್ದಾರೆ.

ವರದಿ: ಸುರೇಶ್ ರಾವ್ ನೇರಂಬಳ್ಳಿ


Spread the love

Exit mobile version