ಭಾರತೀಯ ಸೇನಾ ಪಡೆಗಳಿಗೆ ಸೇರಿದ ಕೊಂಕಣಿ ಯುವತಿಯರು

Spread the love

ಭಾರತೀಯ ಸೇನಾ ಪಡೆಗಳಿಗೆ ಸೇರಿದ ಕೊಂಕಣಿ ಯುವತಿಯರು

ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಫಲಾನುಭವಿಗಳಾದ ಇ. ರೇಶ್ಮಿ ಭಟ್ ಗೋಪಿನಾಥ ಮತ್ತು ಡಾ. ಮೇಘಾ ಎನ್. ಶೆಣೈ ಇಂಜಿನಿಯರಿಂಗ್ ಮತ್ತು ಎಂ.ಬಿ.ಬಿ.ಎಸ್. ವ್ಯಾಸಂಗವನ್ನು ಪೂರೈಸಿದ ಬಳಿಕ ಇದೀಗ ಭಾರತೀಯ ಸೇನೆಯಲ್ಲಿ ತಮ್ಮ ವೃತ್ತಿಯನ್ನು ಆಯ್ದುಕೊಳ್ಳುವುದರ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗಿದ್ದಾರೆ.

ಕೇರಳದ ಕೊಚ್ಚಿಯ ತಿರುಮಲ ದೇವಸ್ವಂ ದೇವಸ್ಥಾನದ ಕರ್ಮಚಾರಿಯಾಗಿರುವ ಗೋಪಿನಾಥ ಭಟ್ ಮತ್ತು ಶೋಭಾ ದಂಪತಿಗಳ ಪುತ್ರಿಯಾಗಿರುವ ರೇಶ್ಮಿ ಭಟ್, ಕಾಲಡಿಯ ಆದಿ ಶಂಕರ ಇಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದಿಂದ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದಿಂದ ಪದವಿಯನ್ನು ಪಡೆದಿರುವರು. ಬಳಿಕ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯ ಏರೊಸ್ಪೇಸ್ ರಂಗದಲ್ಲಿ ಉದ್ಯೋಗವನ್ನು ಪಡೆದು ಮೂರುವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಆ ಬಳಿಕ ಬೆಂಗಳೂರಿನ ಜಾಲಹಳ್ಳಿಯ ವಾಯುಸೇನಾ ತಾಂತ್ರಿಕ ಕಾಲೇಜಿನ ೯೪ನೇ ಏರೋನಾಟಿಕಲ್ ಇಂಜಿನಿಯರಿಂಗ್ ಶಿಕ್ಷಣಕ್ಕೆ ಆಯ್ಕೆಯಾದರು. ೭೪ ವಾರಗಳ ಈ ತರಬೇತಿಯು ಏರೋನಾಟಿಕಲ್ ಇಂಜಿನಿಯರಿಂಗ್ ಮಾತ್ರವಲ್ಲದೇ, ಹೈದರಾಬಾದಿನ ವಾಯುಸೇನಾ ಅಕಾಡೆಮಿಯಲ್ಲಿ ೨೨ ವಾರಗಳ ಎಂ.ಐ.ಎಲ್ ನಾಯಕತ್ವ, ಎಂ.ಜಿ.ಆರ್. ಕೌಶಲ್ಯ ಇತ್ಯಾದಿ ತರಬೇತಿಯನ್ನು ಒಳಗೊಂಡಿರುತ್ತದೆ. ಕಳೆದ ಮೇ ೨೯ರಂದು ಬೆಂಗಳೂರಿನಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ಸನದನ್ನು ಸ್ವೀಕರಿಸಿದ ೧೬ ಪದವೀಧರರಲ್ಲಿ ಓರ್ವಳೇ ಯುವತಿಯಾಗಿರುವ ಶ್ರೇಯಕ್ಕೆ ರೇಶ್ಮಿ ಭಟ್ ಪಾತ್ರರಾಗಿದ್ದಾರೆ. ಪ್ರಸಕ್ತ ಭಾರತೀಯ ವಾಯುಸೇನೆಯಲ್ಲಿ ತಾಂತ್ರಿಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನ ಇ.ಡಿ.ನರಸಿಂಹ ಶೆಣೈ ಮತ್ತು ಗೋಮತಿ ಶೆಣೈಯವರ ಪುತ್ರಿಯಾಗಿರುವ ಡಾ. ಮೇಘಾ ಎನ್. ಶೆಣೈ ಇವರು ಮಂಡ್ಯ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪದವಿಧರರು. ಮಂಡ್ಯ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಬಳಿಕ ಇತ್ತೀಚೆಗೆ ಭಾರತೀಯ ಸೇನೆಯ ಘೋಷಿತವಾದ ಅವಕಾಶಕ್ಕೆ ತಮ್ಮನ್ನು ತೆರೆದು ಕೊಂಡ ಮೇಘಾ ಎನ್. ಶೆಣೈ ಸುದೀರ್ಘ ಆಯ್ಕೆ ಪ್ರಕ್ರಿಯೆಯ ಬಳಿಕ ಗಡಿ ಭದ್ರತಾ ಪಡೆಯಲ್ಲಿ ಅಸಿಸ್ಟೆಂಟ್ ಕಮಾಂಡಿಂಗ್ ವೈದ್ಯಕೀಯ ಅಧಿಕಾರಿಯಾಗಿ ಆಯ್ಕೆಗೊಂಡರು. ಪ್ರಸಕ್ತ ಕೋವಿಡ್ ಶುಶ್ರೂಷಾ ಕೇಂದ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಲು ನಿಯುಕ್ತರಾಗಿದ್ದಾರೆ.

ಈ ಯುವತಿಯರು ವಿಶ್ವ ಕೊಂಕಣಿ ಕೇಂದ್ರದ ಅಲ್ಯುಮಿ ಸಂಘದಲ್ಲಿ ಸಕ್ರಿಯರಾಗಿದ್ದು, ಡಾ. ಮೇಘಾ ಎನ್. ಶೆಣೈ ಅಲ್ಯುಮ್ನಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆಯೂ ಆಗಿದ್ದಾರೆ.

ಈ ಯುವತಿಯರ ದೇಶ ಸೇವೆಯ ಕಡೆಗಿನ ಪ್ರೇರಣಾದಾಯಕ ನಡೆಗೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ವಿಶ್ವ ಕೊಂಕಣಿ ವಿದ್ಯಾರ್ಥಿವೇತನದ ಸ್ಥಾಪನೆಯ ರೂವಾರಿಯಾದ ಟಿ.ವಿ. ಮೋಹನದಾಸ ಪೈ ಯುವತಿಯರನ್ನು ಅಭಿನಂದಿಸಿದ್ದು, ವಿದ್ಯಾರ್ಥಿ ವೇತನ ನಿಧಿಯ ಅಧ್ಯಕ್ಷ, ರಾಮದಾಸ ಕಾಮತ್ ಯು., ಕಾರ್ಯದರ್ಶಿ ಪ್ರದೀಪ ಜಿ. ಪೈ, ಕ್ಷಮತಾ ಅಕಾಡೆಮಿಯ ಪ್ರಧಾನ ನಿರ್ದೇಶಕ ಉಲ್ಲಾಸ ಕಾಮತ್, ಸಂಚಾಲಕ ಗಿರಿಧರ ಕಾಮತ್, ವಿಶ್ವ ಕೊಂಕಣಿ ಕೇಂದ್ರದ ಸಂಘಟನಾ ಕಾರ್ಯದರ್ಶಿ ನಂದಗೋಪಲ ಜಿ. ಶೆಣೈ, ಕೋಶಾಧಿಕಾರಿ ಬಿ.ಆರ್. ಭಟ್ ಮತ್ತು ಸದಸ್ಯರು, ಅಭಿನಂದಿಸಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.


Spread the love