ಭಾರಿ ಮಳೆಯ ಆರ್ಭಟಕ್ಕೆ ತತ್ತರಿಸಿದ ಉಡುಪಿ- ತಗ್ಗು ಪ್ರದೇಶಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Spread the love

ಭಾರಿ ಮಳೆಯ ಆರ್ಭಟಕ್ಕೆ ತತ್ತರಿಸಿದ ಉಡುಪಿ- ತಗ್ಗು ಪ್ರದೇಶಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

ಉಡುಪಿ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು ಉಡುಪಿಯ ನಗರ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.

ಶನಿವಾರ ಬೆಳಿಗ್ಗೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಡುಪಿಯ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.

ಉಡುಪಿ ಮಠದ ಕೆರೆ ಬೈಲಕೆರೆ ನಿಟ್ಟೂರು ಕೊಡಂಕೂರು ಚಿಟ್ಪಾಡಿ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು 4 ದಶಕಗಳ ಬಳಿಕ ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನೆರೆ ಉಂಟಾಗಿದ್ದು ತಗ್ಗು ಪ್ರದೇಶದಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೋಣಿಯಲ್ಲಿ ರಕ್ಷಣೆ ಮಾಡುತ್ತಿದ್ದಾರೆ.

ಭೀಕರ ಮಳೆಯ ಪರಿಣಾಮ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಆವರಣ ಸಂಪೂರ್ಣ ಜಲಾವೃತಗೊಂಡಿದ್ದು ಅಂಗಡಿ ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಭಾರಿಯ ಮಳೆಯ ಪರಿಣಾಮ ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಪುತ್ತಿಗೆ ಭಾಗದಲ್ಲಿ ಕೃತಕ ನೆರೆಯಿಂದಾಗಿ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು ಮನೆಯೊಳಗೆ ನೀರು ನುಗ್ಗಿ ಗೋಡೆ ಕುಸಿದ ಘಟನೆ ಸಂಭವಿಸಿದೆ

ಈಗಾಗಲೇ ಬಂಗಾಳ ಉಪಸಾಗರದಲ್ಲಿ ಸೆ.20ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯ ಪರಿಣಾಮ ರಾಜ್ಯದಲ್ಲಿ ಸೆ. 22ರವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಪ್ರಮುಖವಾಗಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.

ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೆ.20ರಿಂದ 22ರವರೆಗೆ ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ ಇದೆ. ಸೆ.20 ಮತ್ತು 21 ರಂದು ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.


Spread the love