ಭಾರೀ ಮಳೆಗೆ ಬ್ರಹ್ಮಗಿರಿ ಮಸೀದಿ ಜಲಾವೃತ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಬುಧವಾರದಿಂದ ವರುಣನ ಆರ್ಭಟ ಜೋರಾಗಿದ್ದು, ಉಡುಪಿ ನಗರದ ಹಲವೆಡೆ ಕೃತಕ ನೆರೆ ಸೃಷ್ಠಿಯಾಗಿದೆ.
ನಗರ ಆಡಳಿತ ಮಾನ್ಸೂನ್ ಆರಂಭಕ್ಕೆ ಮುನ್ನವೇ ಎಲ್ಲಾ ರೀತಿಯಲ್ಲೂ ಸಿದ್ದಗೊಂಡಿದೆ ಎಂದು ಹೇಳಿಕೊಂಡರೂ ಸಹ ನಗರ ಹಲವು ಪ್ರದೇಶದಲ್ಲಿ ಚರಂಡಿಯಲ್ಲಿ ಹೂಳೆತ್ತದ ಪರಿಣಾಮ ನೀರು ಸರಾಗವಾಗಿ ಹರಿದು ಹೋಗದೆ ಮನೆ, ಮಸೀದಿಗಳ ಆವರಣದಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾದ ಪರಿಣಾಮ ಜನರು ಪರದಾಡಬೇಕಾದ ಪರಿಸ್ಥಿತಿ ಉಂಟಾಯಿತು.
ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಬ್ರಹ್ಮಗಿರಿಯ ನಾಯರ್ ಕೆರೆ ಮಸೀದಿಯ ಆವರಣದಲ್ಲಿ ಚರಂಡಿಯ ನೀರು ನುಗ್ಗಿದ ಪರಿಣಾಮ ಕೃತಕ ನೆರೆ ಸೃಷ್ಟಿಯಾಗಿ ಕೆಲಕಾಲ ಆಂತಕ ಸೃಷ್ಠಿಯಾಯಿತು. ಮಸೀದಿಗೆ ಪ್ರಾರ್ಥನೆಗೆ ಆಗಮಿಸಿದ ಮಂದಿ ತೊಂದರೆ ಅನುಭವಿಸಿದ್ದಲ್ಲದೆ ವಾಹನ ಸವಾರರು ಕೂಡ ಸಮಸ್ಯೆ ಅನುಭವಿಸುವಂತಾಯಿತು.
ಬಳಿಕ ಸ್ಥಳೀಯ ಯುವಕರು ಹಾಗೂ ಪ್ರಾರ್ಥನೆಗೆ ಬಂದವರು ಒಟ್ಟು ಸೇರಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಿದರು.
ನಾಯರ್ ಕೆರೆ ಮಸೀದಿಯ ಪರಿಸರದಲ್ಲಿ ನಗರಸಭೆ ಕೂಡಲೇ ಈ ಬಗ್ಗೆ ಎಚ್ಚರ ವಹಿಸಿ ಸರಿಯಾಗಿ ನೀರು ಹರಿದು ಹೋಗಲು ಚರಂಡಿಯ ವ್ಯವಸ್ಥೆಯ ಮಾಡಿಕೊಡುವಂತೆ ಸಮಾಜ ಸೇವಕ ಇಕ್ಬಾಲ್ ಮನ್ನಾ ಆಗ್ರಹಿಸಿದ್ದಾರೆ.