ಭಾಸ್ಕರ್ ಶೆಟ್ಟಿ ಕೊಲೆ: ಬಂಟ ಸಮುದಾಯದಿಂದ ಪ್ರತಿಭಟನೆಗೆ ನಿರ್ಧಾರ
ಉಡುಪಿ: ತನ್ನ ಪತ್ನಿ ಮತ್ತು ಪುತ್ರನಿಂದಲೇ ಹತ್ಯೆಗೊಳಗಾದ ಖ್ಯಾತ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿ ಬಂಟ ಸಮುದಾಯದ ಪ್ರಮುಖರು ಬಂಟರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಉಡುಪಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ಬಂಟ ಸಮುದಾಯದ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಆ.10ರಂದು ಸಂಜೆ 4ಕ್ಕೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಿಂದ ಮೆರವಣಿಗೆಯಲ್ಲಿ ಹೊರಟು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗೆ, ಪ್ರಭಾರ ಎಸ್ಪಿ ಅವರಿಗೆ ಈ ಕುರಿತು ಮನವಿ ನೀಡಲು, ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿಯ ಪ್ರತಿಯನ್ನು ಕಳುಹಿಸಲು ಸಭೆ ಸರ್ವಾನುಮತದಿಂದ ನಿರ್ಧರಿಸಿತು.
ಪ್ರಕರಣದಲ್ಲಿ ಹತ್ಯೆಗೊಳಗಾದ ಭಾಸ್ಕರ ಶೆಟ್ಟಿ ಅವರ ತಾಯಿ ಗುಲಾಬಿ ಶೆಟ್ಟಿ ಹಾಗೂ ಕುಟುಂಬದ ಪರವಾಗಿ ನಿಲ್ಲಲು ಬಂಟರ ಸಮುದಾಯ ನಿರ್ಧರಿಸಿದ್ದು, ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ರಾಜ ಮರ್ಯಾದೆ ಸಿಗುತ್ತಿದೆ. ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿರುವ ಶಂಕೆಯನ್ನು ಹಲವರು ವ್ಯಕ್ತಪಡಿಸಿದರೆ, ಕೊಲೆ ಪ್ರಕರಣದ ದಿಕ್ಕು ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿರುವ ಉಡುಪಿ ಬಂಟರ ಸಂಘವು ಆರೋಪಿಗಳಿಗೆ ಶಿಕ್ಷೆಯಾಗುವವರೆಗೆ ಹೋರಾಟ ಮುಂದುವರಿಸಲು ನಿರ್ಧರಿಸಿದೆ.
ಭಾಸ್ಕರ ಶೆಟ್ಟಿ ನಾಪತ್ತೆಯಾದಾಗ ಪತ್ನಿ, ಮಗ ದೂರು ನೀಡಿಲ್ಲ. ತಾಯಿ ದೂರು ನೀಡಿದ್ದಾರೆ. ಇದರಿಂದಲೇ ಪೊಲೀಸರಿಗೆ ಸಂಶಯ ಬರಬೇಕಿತ್ತು. ಆದರೆ ನಾಪತ್ತೆಯನ್ನು ಗಂಭೀರವಾಗಿ ಪರಿಗಣಿಸದೆ ತನಿಖೆ ವಿಳಂಬವಾಗುವಂತೆ ನೋಡಿಕೊಳ್ಳಲಾಗಿದೆ. ಕೊಲೆ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ನಡೆದಿದ್ದು, ಭಾಸ್ಕರ ಶೆಟ್ಟಿ ಅವರ ತಾಯಿ ಮತ್ತು ಮನೆಯವರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ಇನ್ನೆಂದೂ ಇಂತಹ ಪ್ರಕರಣ ನಡೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.
ಆರೋಪಿಗಳ ಪರವಾಗಿ ಬಂಟ ಸಮುದಾಯದ ನ್ಯಾಯವಾದಿಗಳು ವಾದಿಸದಂತೆ ನೋಡಿಕೊಳ್ಳಬೇಕು. ಬಂಟರ ಸಮುದಾಯದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಪ್ರೋತ್ಸಾಹಿಸಿ, ತಪ್ಪು ಮಾಡಿದವರ ವಿರುದ್ದ ಪ್ರತಿಭಟಿಸಿ, ಅಗತ್ಯ ಬಿದ್ದರೆ ಬಹಿಷ್ಕರಿಸಲೂ ಹಿಂಜರಿಯಬಾರದು ಎಂದು ಸಭೆಯಲ್ಲಿ ಕೆಲವರು ವಾದಿಸಿದರು.
ಭಾಸ್ಕರ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ, ಭಾವ ಚಂದ್ರಶೇಖರ ಶೆಟ್ಟಿ, ಸಮಾಜದ ನಾಯಕರಾದ ರವೀಂದ್ರನಾಥ ಹೆಗ್ಡೆ, ಲೀಲಾಧರ ಶೆಟ್ಟಿ, ರೋಹಿತ್ ಕುಮಾರ್ ಕಟೀಲ್, ಗುರ್ಮೆ ಸುರೇಶ್ ಶೆಟ್ಟಿ, ಶೀಲಾ ಕೆ.ಶೆಟ್ಟಿ, ಮನೋಹರ ಶೆಟ್ಟಿ, ಸುರೇಶ್ ಶೆಟ್ಟಿ, ವೀಣಾ ಶೆಟ್ಟಿ, ಸುಧಾಕರ ಶೆಟ್ಟಿ, ಜನನಿ ದಿವಾಕರ ಶೆಟ್ಟಿ, ರವಿಶೆಟ್ಟಿ, ಕುರ್ಕಾಲು ದಿನಕರ ಶೆಟ್ಟಿ, ಶಶಿಧರ ಶೆಟ್ಟಿ, ಶಂಭು ಶೆಟ್ಟಿ, ವಿಠಲ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಭುಜಂಗ ಶೆಟ್ಟಿ, ಶಮಿನಾ ಶೆಟ್ಟಿ ಉಪಸ್ಥಿತರಿದ್ದರು. ಉದಯಕುಮಾರ್ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರೂಪಿಸಿದರು.