Home Mangalorean News Kannada News ಭಾಸ್ಕರ್ ಶೆಟ್ಟಿ ಹತ್ಯೆ ಆರೋಪಿ ನಿರಂಜನ್ ಭಟ್ ಗೆ ಷರತ್ತು ಬದ್ದ ಜಾಮೀನು ಮಂಜೂರು

ಭಾಸ್ಕರ್ ಶೆಟ್ಟಿ ಹತ್ಯೆ ಆರೋಪಿ ನಿರಂಜನ್ ಭಟ್ ಗೆ ಷರತ್ತು ಬದ್ದ ಜಾಮೀನು ಮಂಜೂರು

Spread the love

ಭಾಸ್ಕರ್ ಶೆಟ್ಟಿ ಹತ್ಯೆ ಆರೋಪಿ ನಿರಂಜನ್ ಭಟ್ ಗೆ ಷರತ್ತು ಬದ್ದ ಜಾಮೀನು ಮಂಜೂರು

ಉಡುಪಿ: ನಾಲ್ಕು ವರ್ಷಗಳ ಹಿಂದೆ ಕರಾವಳಿ ಭಾಗದಲ್ಲಿ ಸಂಚಲನ ಸೃಷ್ಟಿಸಿದ್ದ ಎನ್‌ಆರ್‌ಐ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ನಿರಂಜನ್ ಭಟ್ ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ದೊರಕಿದೆ. ಉಡುಪಿ ಜಿಲ್ಲಾ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿದೆ.

 

ನಿರಂಜನ್ ಭಟ್ ಈ ಪ್ರಕರಣದ ಮೂರನೇ ಆರೋಪಿಯಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಜೈಲುವಾಸ ಅನುಭವಿಸಿದ್ದ. ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪದ ಮೇಲೆ ಈ ಪ್ರಕರಣದಲ್ಲಿಶ್ರೀನಿವಾಸ ಭಟ್ ಹಾಗೂ ಚಾಲಕ ರಾಘವೇಂದ್ರ ಎನ್ನುವವರನ್ನೂ ಸಹ ಬಂಧಿಸಲಾಗಿದ್ದರೂ, ಅವರನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಎದುರಿಸಿದ್ದು ಅಪಮಾನದಿಂದ ಮಾನಸಿಕವಾಗಿ ಕುಗ್ಗಿದ್ದ ಆರೋಪಿ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ (65) ನಿಧನರಾಗಿದ್ದರು. ತಂದೆಯ ಮರಣೋತ್ತರ ಕಾರ್ಯಗಳನ್ನು ಕೈಗೊಳ್ಳಲು ಆರೋಪಿಗೆ ಜಾಮೀನು ನೀಡುವಂತೆ ನಿರಂಜನ್ ಭಟ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ವಕೀಲರ ವಾದವನ್ನು ಆಲಿಸಿದ ಜಿಲ್ಲಾ ನ್ಯಾಯಾಲಯವು ಐದು ಲಕ್ಷ ರೂ.ಬಾಂಡ್ ಪಡೆದು ಜುಲೈ 7 ರವರೆಗೆ ಅನ್ವಯಿಸುವಂತೆ ಜಾಮೀನು ನೀಡಿದೆ. ಇದೇ ವೇಳೆ ಜುಲೈ 7 ರಂದು ಅಥವಾ ಅದಕ್ಕೂ ಮೊದಲು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಆರೋಪಿಯನ್ನು ನ್ಯಾಯಾಂಗ ಕಸ್ಟಡಿಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದ ಮುಖ್ಯ ಮತ್ತು ಮೊದಲ ಆರೋಪಿ ಮೃತ ಭಾಸ್ಕರ್ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿ ಈಗಾಗಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಎರಡನೇ ಆರೋಪಿ ಮತ್ತು ಮೃತನ ಮಗ ನವನೀತ್ ಶೆಟ್ಟಿ ಇನ್ನೂ ಜೈಲಿನಲ್ಲಿದ್ದಾರೆ.

ಉಡುಪಿ ಮತ್ತು ದುಬೈನಲ್ಲಿ ಮೆಡಿಕಲ್ ಹಾಗೂ ಹೋಟೆಲ್‌ಗಳನ್ನು ಹೊಂದಿದ್ದ ಭಾಸ್ಕರ್ ಶೆಟ್ಟಿ ಅವರನ್ನು ಜುಲೈ 28, 2016 ರಂದು ಹತ್ಯೆ ಮಾಡಲಾಗಿತ್ತು. ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ನಂತರ ಅವರ ಶವವನ್ನು ಬೆಳ್ಮಣ್ ಗೆ ಕೊಂಡೊಯ್ದು ವೃತ್ತಿಯಲ್ಲಿ ಜ್ಯೋತಿಷಿಯೂ ಆಗಿರುವ ಆರೋಪಿ ನಿರಂಜನ್ ಭಟ್, ಮೃತ ಭಾಸ್ಕರ್ ಶೆಟ್ಟಿಯ ಶವವನ್ನು ಹೋಮದ ಆಚರಣೆಗೆ ಬಳಸಲಾಗುವ ಕುಂಡದಲ್ಲಿ ಹಾಕಿ ಸುಟ್ಟಿದ್ದನು. ಮೃತ ಭಾಸ್ಕರ್ ಶೆಟ್ಟಿಯ ತಾಯಿ ತನ್ನ ಮಗನ ಬಗ್ಗೆ ಉಡುಪಿ ಪೊಲೀಸರಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆಸ್ತಿಯ ವಿಚಾರದಲ್ಲಿ ದಂಪತಿಗಳ ನಡುವಿನ ಜಗಳ , ಆಬಗ್ಗೆ ಮೃತ ಉದ್ಯಮಿಯ ತಾಯಿ ನೀಡಿದ್ದ ಸುಳಿವು ಪೊಲೀಸರನ್ನು ಆರೋಪಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ಕಾರಣವಾಗಿತ್ತು.


Spread the love

Exit mobile version