ಭಿಕ್ಷೆ ಎತ್ತುತ್ತಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲಿ ಡಿಸ್ಟಿಂಕ್ಷನ್!

Spread the love

ಭಿಕ್ಷೆ ಎತ್ತುತ್ತಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲಿ ಡಿಸ್ಟಿಂಕ್ಷನ್!

ಕುಂದಾಪುರ : ಸಾಧನೆಯ ಛಲವೊಂದಿದ್ದರೆ ಸಾಕು ಯಾವುದನ್ನೂ ಕೂಡ ಸಾಧಿಸಬಹುದು ಅದಕ್ಕೆ ತಾಜಾ ಉದಾಹರಣೆ ಎಂಬಂತೆ ರಸ್ತೆ ಬದಿಯಲ್ಲಿ ಭಿಕ್ಷೆ ಎತ್ತುತ್ತಿದ್ದ ಕಾವೇರಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಒಟ್ಟು 533 ಅಂಕ ಪಡೆದು ಗಮನಸೆಳೆದಿದ್ದಾಳೆ.

ಕೆಲವು ವರ್ಷಗಳ ಹಿಂದೆ ಕುಂದಾಪುರದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಪುಟ್ಟ ಬಾಲೆಯ ಸಂಕಷ್ಟ ಕಂಡು ಸಹೃದಯಿಗಳು ಬೇಳೂರಿನ ಅನಾಥ ಮಕ್ಕಳ ಆಸರೆಯ ತಾಣ ಸ್ಫೂರ್ತಿಧಾಮಕ್ಕೆ ಸೇರಿಸಿದ್ದರು. ಸ್ಪೂರ್ತಿಧಾಮ ಸೇರಿದ ನಂತರ ಕಾವೇರಿ ಬದುಕು ಬದಲಾಯಿತು. ಸ್ಪೂರ್ತಿ ಸಂಸ್ಥೆ ಸಂಚಾಲಕ ಡಾ.ಕೇಶವ ಕೋಟೇಶ್ವರ ಆಕೆಯ ಶೈಕ್ಷಣಿಕ ಆಸಕ್ತಿ ಗುರುತಿಸಿ ಕೆದೂರು ಪ್ರಾಥಮಿಕ ಶಾಲೆಗೆ ದಾಖಲಿಸಿದರು. ಓದಿನಲ್ಲಿ ಚುರುಕಾಗಿದ್ದ ಕಾವೇರಿ ಎಲ್ಲಾ ತರಗತಿಯಲ್ಲೂ ಉತ್ತಮ ಅಂಕ ಪಡೆದು ಪಾಸಾಗುತ್ತಾ ಬಂದಳು.

ಕೆದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರೈಸಿ ತೆಕ್ಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ದಾಖಲಾತಿ ಪಡೆದುಕೊಂಡಿದ್ದಳು. ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದ ಈಕೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಉತ್ತಮ ಅಂಕ ಪಡೆದು ಇದೀಗ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.ಮುಂದೆ ಎಲ್‌ಎಲ್‌ಬಿ(ಕಾನೂನು ವಿದ್ಯಾಭ್ಯಾಸ) ಮಾಡಿ ನೊಂದವರ ನೆರವಿಗೆ ನಿಲ್ಲಬೇಕೆಂಬುವುದು ನನ್ನ ಅಭಿಲಾಷೆ ಎನ್ನುತ್ತಾರೆ ಕಾವೇರಿ.

ಕಾವೇರಿ ಭಿಕ್ಷಾಟನೆ ಮಾಡಿಕೊಂಡಿದ್ದ ಬಾಲಕಿ. ತಾಯಿ ಇಲ್ಲ. ತಂದೆ ನಡುನೀರಿನಲ್ಲಿಕೈಬಿಟ್ಟುಹೋಗಿದ್ದ. ಸಹೃದಯರು ನಮ್ಮ ಸಂಸ್ಥೆಗೆ ಕಾವೇರಿ ಮತ್ತು ಆಕೆಯ ಸಹೋದರಿಯನ್ನು ಸೇರಿಸಿದ್ದಾರೆ. ಆಕೆ ತುಂಬು ಚುರುಕಿನ ಹುಡುಗಿ. ಆಕೆ ಬಯಸಿದಷ್ಟು ಶಿಕ್ಷಣ ನೀಡಬೇಕೆಂಬ ಹೆಬ್ಬಯಕೆ ನಮ್ಮದು. ಆಕೆಯ ಸಾಧನೆ ನಮಗೆ ಸಂಸ್ಥೆಯ ಎಲ್ಲಾ ಅನಾಥ ಮಕ್ಕಳಲ್ಲೂ ಹೊಸ ಸ್ಫೂರ್ತಿ ತುಂಬಿದೆ ಎನ್ನುತ್ತಾರೆ  ಸ್ಫೂರ್ತಿ ಸಂಸ್ಥೆಯ ಮುಖ್ಯಸ್ಥ  ಡಾ.ಕೇಶವ ಕೋಟೇಶ್ವರ


Spread the love